ಹುಬ್ಬಳ್ಳಿ: “ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ಆಫರ್ ನೀಡುವ ಅವಶ್ಯಕತೆ ಆಗಲಿ, ಅನಿವಾರ್ಯತೆಯಾಗಲಿ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ವಾಗ್ದಾಳಿ ನಡೆಸಿದರು.
ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಜನರಿಗೆ ದಾರಿ ತಪ್ಪಿಸುವ ಭಾಗವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 250 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕ್ಷಾಮ ಹೆಚ್ಚಾಗಿದೆ. ಅಲ್ಲದೇ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬರ ಪರಿಶೀಲನೆ ಅಧ್ಯಯನ ತಂಡವನ್ನು ಮಾಡಿ ನಾಳೆಯಿಂದ ಸಮೀಕ್ಷೆ ಮಾಡಲಾಗುತ್ತದೆ ಎಂದರು.
ಮುಂದುವರೆದು ವಿರೋಧಪಕ್ಷದ ನಾಯಕ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿರುವ ಎಲ್ಲ ನಾಯಕರು ಸಮರ್ಥರೇ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಸೂಕ್ತ ಸಮಯದಲ್ಲಿ ನಮ್ಮ ವರಿಷ್ಠರು ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದ ಕಟೀಲ್, ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ಗೈಡ್ ಲೈನ್ ಇದೆ. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ವರದಿ ಮೇಲೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಪ್ರಸ್ತಾವನೆ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತದೆ. ಖಂಡಿತವಾಗಿಯೂ ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.