ಬೆಂಗಳೂರು: ರಾಜ್ಯದ 15 ತಿಂಗಳ ಮಗುವೊಂದು ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಿರುವ ದುಬಾರಿ ಚುಚ್ಚುಮದ್ದಿನ ಆಮದು ಸುಂಕಕ್ಕೆ ವಿನಾಯಿತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿಯವರನ್ನು (Narendra Modi) ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆಯನ್ನು ಗುಣಪಡಿಸಬಹುದಾದ ಝೋಲ್ಗೆನ್ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ₹17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಮನವಿ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂದರೇನು?
‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ (ಬೆನ್ನುಮೂಳೆಯ ಸ್ನಾಯು ಕ್ಷೀಣತೆ) ಎಂದರೆ, ಮೆದುಳು ಮತ್ತು ಬೆನ್ನುಹುರಿಯಲ್ಲಿ (ಮೋಟಾರ್ ನ್ಯೂರಾನ್ಗಳು) ವಿಶೇಷ ನರ ಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಕೊಲ್ಲುವ ಆನುವಂಶಿಕ ಕಾಯಿಲೆಗಳ ಗುಂಪನ್ನು ಸೂಚಿಸುತ್ತದೆ. ಮೋಟಾರು ನರಕೋಶಗಳು ತೋಳುಗಳು, ಕಾಲುಗಳು, ಮುಖ, ಎದೆ, ಗಂಟಲು ಮತ್ತು ನಾಲಿಗೆಯಲ್ಲಿ ಚಲನೆಯನ್ನು ನಿಯಂತ್ರಿಸುತ್ತವೆ, ಹಾಗೆಯೇ ಮಾತನಾಡುವುದು, ನಡೆಯುವುದು, ನುಂಗುವುದು ಮತ್ತು ಉಸಿರಾಟದಂತಹ ಅಸ್ಥಿಪಂಜರದ ಸ್ನಾಯುವಿನ ಚಟುವಟಿಕೆಯನ್ನು ನಿಯಂತ್ರಿಸುತ್ತದೆ.