Breaking News

ಅರಣ್ಯ ಸಿಬ್ಬಂದಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ

Spread the love

ಬೆಂಗಳೂರು: ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆ ಸುತ್ತಮುತ್ತ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.

ಚಿರತೆ ಕಾಣಿಸಿಕೊಂಡ ಹಿನ್ನೆಲೆ ಸೆರೆಹಿಡಿಯಲು ಟಾಸ್ಕ್​ ಫೋರ್ಸ್​ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಟಾಸ್ಕ್​ ಫೋರ್ಸ್​ ಸಿಬ್ಬಂದಿ ಧನರಾಜ್​ ಎಂಬುವರು ಚಿರತೆ ದಾಳಿಯಿಂದ ಗಾಯಗೊಂಡಿದ್ದರು. ಚಿರತೆ ದಾಳಿಯಿಂದ ಧನರಾಜ್​ ಕಾಲು, ಹೊಟ್ಟೆ ಭಾಗಕ್ಕೆ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿನ್ನೆ ರಾತ್ರಿ ಮತ್ತೆ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ ಕಾಂಪೌಂಡ್​ ಜಿಗಿದು ಒಡಾಡುತ್ತಿದ್ದುದನ್ನು ಅಲ್ಲಿನ ನಿವಾಸಿಗಳು ನೋಡಿದ್ದರು. ಆತಂಕಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಚಿರತೆ ಸೆರೆ ಕಾರ್ಯಾಚರಣೆ ವೇಳೆ ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಬಂಡೆಪಾಳ್ಯ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಸಂಪೂರ್ಣ ಬಂದ್ ಮಾಡಿದ್ದರು.

ವೈದ್ಯರ ಮೇಲೂ ಚಿರತೆ ದಾಳಿ : ಅರವಳಿಕೆ ನೀಡಲು ಬಂದಿದ್ದ ವೈದ್ಯರ ಮೇಲೂ ಚಿರತೆ ದಾಳಿ ಮಾಡಿತ್ತು. ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ಎರಡು ಬಾರಿ ಚಿರತೆಗೆ ಅರವಳಿಕೆ ಮದ್ದು ಫೈರ್​ ಮಾಡಿದ್ದು, ಎರಡು ಬಾರಿಯೂ ಮಿಸ್​ಫೈರ್​ ಆಗಿತ್ತು. ಮೂರನೇ ಬಾರಿ ಸರಿಯಾಗಿ ಫೈರ್​ ಆಗಿದ್ದು, ಚಿರತೆ ಪ್ರಜ್ಞೆ ತಪ್ಪಲು 20 ನಿಮಿಷ ಬೇಕಾಗಿದ್ದು, ಈ ಗ್ಯಾಪ್​ನಲ್ಲಿ ಚಿರತೆ ಸಿಬ್ಬಂದಿ ಕಣ್ಣಿನಿಂದ ತಪ್ಪಿಸಿಕೊಂಡಿತ್ತು.

ಬಳಿಕ ಪಾಳು ಕಟ್ಟಡದ ಒಳಗೆ ಓಡಿದ್ದ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿತ್ತು, ಕೂಡಲೇ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು. ಥರ್ಮಲ್ ಡ್ರೋಣ್​ ಕ್ಯಾಮರಾದಲ್ಲೂ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಇರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆ ಇಡೀ ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ನಂತರ ಇಂದು ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಗಿತ್ತು.

ಅರಣ್ಯ ಸಿಬ್ಬಂದಿ‌ ಮೊಹಮ್ಮದ್ ಫೈಜಾನ್ ಹೇಳಿದ್ದೇನು?: ಚಿರತೆ ಚಲನವಲನ ಗಮನಿಸಿದರೆ ಅದು ಹೆಣ್ಣು ಎಂದು ತಿಳಿದು ಬರುತ್ತದೆ. ಇನ್ನೂ ತೀಕ್ಷ್ಣವಾಗಿ ಗಮನಿಸಿದರೆ ಅದೊಂದು ಲೆಪರ್ಡ್. ಡ್ರೋನ್​ ಮೂಲಕ ಗಮನಿಸಿದಾಗ ಅದು ಲೆಪರ್ಡ್ ಎಂದು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಹೀಗಾಗಿ ಅದು ಸಿಕ್ಕ ನಂತರ ಗೊತ್ತಾಗಿದೆ. ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ಕಾರ್ಯಾಚರಣೆಯಿಂದ ಚಿರತೆ ಸೆರೆ ಸಿಕ್ಕಿದೆ. ಡ್ರೋನ್ ಮೂಲಕ ಚಿರತೆ ಇರುವುದನ್ನು ಖಚಿತಪಡಿಸಿ, ಅದರ ಜಾಡು ಹಾಗೂ ಯಾವ ಕಡೆ ಚಲಿಸುತ್ತದೆ ಎಂಬುದನ್ನು ಗಮನಿಸಿ ಬೋನು ಇಡಲಾಗಿತ್ತು. ಮತ್ತು ಒಮ್ಮೆಲೇ ಅದರ ವೇಗ ಹಾಗೂ ಪರಾರಿಯಾಗುವ ಎಲ್ಲ ಮಾರ್ಗಗಳನ್ನು ಅಡ್ಡಗಟ್ಟಿ ಹಿಡಿಯುವಲ್ಲಿ ಸಫಲ ಕಂಡಿದ್ದೇವೆ. ಇದಕ್ಕೆ ನೆರವಾದವರಿಗೆ ಧನ್ಯವಾದ ಎಂದು ಅರಣ್ಯ ಸಿಬ್ಬಂದಿ‌ ಮೊಹಮ್ಮದ್ ಫೈಜಾನ್ ತಿಳಿಸಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ