ಚಿಕ್ಕೋಡಿ: ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾಗಿ ಮೆಕ್ಕೆಜೋಳ ಬೆಳೆಯುವುದು ವಾಡಿಕೆ.
ಸದ್ಯ ಈ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆ ಕೊರತೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಗಳು ರೈತನ ಕಣ್ಣ ಮುಂದೆಯೇ ಒಣಗುತ್ತಿವೆ. ಅನ್ನದಾತ ವಿಲಿವಿಲಿ ಒದ್ದಾಡುವಂತಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದು ಲಕ್ಷಾಂತರ ಹೆಕ್ಟೇರ್ನಲ್ಲಿ ಬೆಳೆದ ಗೋವಿನ ಜೋಳ ಫಸಲಿನ ಅಂಚಿಗೆ ಬಂದು ಒಣಗುತ್ತಿದ್ದು, ರೈತನನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಅಲ್ಪ ಮಳೆಯಲ್ಲಿ ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳು ನೀರಿನ ಅಭಾವದಿಂದ ನೆಲಕಚ್ಚುತ್ತಿವೆ.
ಅಥಣಿ ತಾಲೂಕಿನ ಅನಂತಪುರ ಹೋಬಳಿ ವ್ಯಾಪ್ತಿಯಲ್ಲಿ ರೈತ ಅಶೋಕ್ ಶಿವುಗೌಡ ಪಾಟೀಲ್ ಎಂಬವರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಒಣಗಿ ನಿಂತಿದೆ. ಈ ಬಗ್ಗೆ ಮಾತನಾಡಿರುವ ಅವರು, ಇನ್ನೇನು 30 ರಿಂದ 40 ದಿನಗಳಲ್ಲಿ ಫಸಲು ನಮ್ಮ ಕೈ ಸೇರುವ ಹಂತದಲ್ಲಿತ್ತು. ವಾಡಿಕೆಯಂತೆ ಮಳೆ ಆಗದೇ ಇರೋದ್ರಿಂದ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಒಣಗುತ್ತಿದೆ. ಒಂದು ಎಕರೆಗೆ ಸುಮಾರು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಒಂದು ಎಕರೆಗೆ 50,000 ರೂ. ಆದಾಯ ಬರುತ್ತಿತ್ತು. ಈ ಬೆಳೆ ನಮ್ಮ ಜೀವಕ್ಕೆ ದಾರಿಯಾಗುತ್ತಿತ್ತು. ಆದರೆ ಮಳೆ ಕೊರತೆಯಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಈ ಪರಿಸ್ಥಿತಿ ಬಂದಿದೆ. ರಾಜಕಾರಣಿಗಳು ನೀರಾವರಿ ಯೋಜನೆಗಳ ಬಗ್ಗೆ ಭರವಸೆಗಳನ್ನು ಮಾತ್ರ ನೀಡುತ್ತಾರೆ. ಆದರೆ ಯಾವುದೇ ನೀರಾವರಿ ಯೋಜನೆಗಳನ್ನು ಈ ಭಾಗಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದರು.