ಬೆಂಗಳೂರು: 1972ರ ಸೆಕ್ಷನ್ 43ರ ಅಡಿ ನವಿಲು ಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನವಿಲು ಗರಿಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ಭಾರತ ಸರ್ಕಾರ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶ – ಸಿಐಟಿಇಎಸ್ ನಿಷೇಧಿಸಿದೆ. ಆದರೆ ನೈಸರ್ಗಿಕವಾಗಿ ನವಿಲುಗಳಿಂದ ಉದುರಿದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನುಬಾಹಿರವಲ್ಲ. ಆದರೆ, ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಅದು ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದ್ದಾರೆ.
ನವಿಲು ಗರಿಗಳನ್ನು ಇಟ್ಕೊಂಡಿರುವ ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದ್ದರು. ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ. ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ, ರೇಡ್ ಮಾಡಿ. ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿ. ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತೆ. ಈ ಸಂಬಂಧ ಸರ್ಕಾರಕ್ಕೆ ನಾವು ಪತ್ರ ಬರೆದು ಆಗ್ರಹಿಸುತ್ತೇವೆ. ಸತ್ತ ಪ್ರಾಣಿಗಳ ಚರ್ಮ ಇಟ್ಕೊಳ್ಳುವುದು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ. ಸಲ್ಮಾನ್ ಖಾನ್ ಥರ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ. ಕಾನೂನು ಪಾಲಿಸಿದರೆ ಶೇ100 ರಷ್ಟು ಪಾಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾನೂನು ಕೇವಲ ಹಿಂದೂ ಸಮಾಜಕ್ಕೆ ಅನ್ವಯಿಸಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆ. ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳ ವಿರುದ್ಧ ಟಾರ್ಗೆಟ್ ಮಾಡಲಾಗ್ತಿದೆ. ಕಾನೂನಿನಲ್ಲಿ ಎಲ್ಲರಿಗೂ ಸಮಾನವಾಗಿಯೇ ಕ್ರಮ ತಗೋಬೇಕು. ಮುಸ್ಲಿಂ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡ್ತಾರೆ. ಇದು ಕೂಡಾ ಕಾನೂನಿಗೆ ವಿರುದ್ಧವಾಗಿದ್ದು, ಕ್ರಮ ತೆಗೆದುಕೊಳ್ಳಬೇಕು. ಕೇವಲ ಹಿಂದೂ ಧರ್ಮ ಟಾರ್ಗೆಟ್ ಮಾಡಿ ಕೇಸ್ ಹಾಕುವಂತಾಗಬಾರದು ಎಂದು ಶಾಸಕ ಬೆಲ್ಲದ್ ದೂರಿದ್ದರು.
ಅರಣ್ಯಾಧಿಕಾರಿಗಳು ಧರಿಸಿದರೆ ಕಠಿಣ ಕ್ರಮ: ಹುಲಿ ಉಗುರಿನ ಲಾಕೆಟ್ನ್ನು ಅರಣ್ಯಾಧಿಕಾರಿಗಳೇ ಧರಿಸುವುದು ಅಕ್ಷಮ್ಯ ಅಪರಾಧ. ಅರಣ್ಯಾಧಿಕಾರಿಗಳು ಹುಲಿ ಉಗುರಿನ ಲಾಕೆಟ್ ಧರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದ್ದಾರೆ.