ಬೆಳಗಾವಿ, ಅಕ್ಟೋಬರ್ 19: ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಬರಗಾಲ(drought)ಇದ್ದು ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪಂಚನದಿಗಳು ಹರಿದರೂ ಆ ನೀರು ಬಹುತೇಕ ರೈತರಿಗೆ ತಲುಪುತ್ತಿಲ್ಲ. ಬಹುತೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ನೀರಾವರಿ ಇಲಾಖೆ ಸಭೆ ನಡೆಸಿದರು. ಆದರೆ ರೈತರ ಸಮಸ್ಯೆ ಗಮನ ಸೆಳೆಯಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲೊಂದಾದ ಬೆಳಗಾವಿಯಲ್ಲಿ ಸಪ್ತ ನದಿಗಳು ಹರಿದಿವೆ. ಅದರಲ್ಲೂ ಚಿಕ್ಕೋಡಿ ಉಪವಿಭಾಗದಲ್ಲಿ ದೂಧ್ಗಂಗಾ, ವೇದಗಂಗಾ, ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ಹರಿಯುತ್ತವೆ.
ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕು ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಸುಮಾರು 63 ಗ್ರಾಮಗಳನ್ನು ಹೊರತುಪಡಿಸಿ ಉಳಿದೆಡೆ ನೀರಾವರಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಹಲವು ಏತನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಸರ್ಕಾರದ ನಿರ್ಲಕ್ಷ್ಯದಿಂದ ಎಲ್ಲಾ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ನಿನ್ನೆ ಜಲಸಂಪನ್ಮೂಲ ಸಚಿವರು, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದರು.