ಚಿಕ್ಕೋಡಿ (ಬೆಳಗಾವಿ): ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಬೆಳಗಾವಿಯ ಜಿಲ್ಲೆಯ ಯುವಕ ಸುರಕ್ಷಿತವಾಗಿ ಮರಳಿ ತಮ್ಮೂರಿಗೆ ಹಿಂತಿರುಗಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆ ಮುಂದುವರಿಸಿದ್ದು, ಅದರ ನೆರವಿನಿಂದ ಯುವಕ ತಾಯ್ನಾಡಿಗೆ ಮರಳಿದ್ದಾನೆ.
ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ಮಹಾವೀರ ಹಲಕರ್ಣಿ ಎಂಬ ಯುವಕ ಭಾನುವಾರ ತಮ್ಮೂರಿಗೆ ಮರಳಿ ಬಂದಿದ್ದಾರೆ. ಇಸ್ರೇಲ್ ದೇಶದ ಬೀರಶೇವಾ ಪ್ರದೇಶದ ಬೆನ್ ಗೋರಿನ್ ವಿಶ್ವವಿದ್ಯಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಯಾಗಿ ವಿದ್ಯಾರ್ಜನೆ ಮಾಡುತ್ತ, ನೆಲೆ ನಿಂತಿದ್ದರು. ಸದ್ಯ ಯುದ್ಧ ನಡೆಯುತ್ತಿರುವ ಹಿನ್ನೆಲೆ ಭಾರತ ದೇಶಕ್ಕೆ ವಾಪಸ್ ಬಂದಿದ್ದಾರೆ.
ಇಸ್ರೇಲ್ ಯುದ್ಧದ ಭಯಾನಕತೆ ಬಿಚ್ಚಿಟ್ಟ ಮಹಾವೀರ: ಸದ್ಯ ಇಸ್ರೇಲ್ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಭಾರತ ದೇಶಕ್ಕೆ ಮರಳಿ ಬಂದಿದ್ದು ಸಂತಸ ತಂದಿದೆ. ಕೇಂದ್ರ ಸರ್ಕಾರ ಆಪರೇಷನ್ ಅಜಯ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಆಪರೇಷನ್ ಅಜಯ್ ಸಕ್ಸಸ್ ಆಗಿದೆ. ಕೇಂದ್ರ ಸರ್ಕಾರ ಎಲ್ಲರನ್ನೂ ಸಂಪರ್ಕ ಮಾಡಿದೆ ಎಂದು ತಿಳಿಸಿದರು.
ಅಟ್ಯಾಕ್ ಆದಾಗ ಸೈರನ್ ಧ್ವನಿ ಕೇಳಿಸಿತು: ಅಟ್ಯಾಕ್ ಆಗಿದ್ದ ವೇಳೆ ಸೈರನ್ ಧ್ವನಿ ಕೇಳಿಸಿತು. ಸೈರಲ್ ಧ್ವನಿ ಕೇಳಿಸಿದ ತಕ್ಷಣ ನಮಗೆಲ್ಲ ಬಂಕರ್ಗೆ ತೆರಳುವ ಸೂಚನೆ ನೀಡಲಾಗಿತ್ತು. ಅಟ್ಯಾಕ್ ಆಗಿದ್ದ ವೇಳೆ ಕೆಲವು ಕಾಲ ನಮಗೆಲ್ಲ ಆತಂಕದ ಮನೆ ಮಾಡಿತ್ತು. ಭಾರತೀಯ ರಾಯಭಾರ ಕಚೇರಿ ವಾಟ್ಸ್ಆಯಪ್ ಗ್ರೂಪ್ ನಮ್ಮನ್ನು ಸಂಪರ್ಕ ಮಾಡಿತು. ಇಂದು ನಾವು ಸುರಕ್ಷಿತವಾಗಿ ತಾಯ್ನಾಡು ಭಾರತಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದರು.
ಆಪರೇಷನ್ ಅಜಯ್ : ಸಂಘರ್ಷ ಪೀಡಿತ ಇಸ್ರೇಲ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಅಂಗವಾಗಿ ಭಾರತ ಸರ್ಕಾರವು ಆಪರೇಷನ್ ಅಜಯ್ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಮೂಲಕ ಇಸ್ರೇಲ್ನಲ್ಲಿ ಸಿಲುಕಿರುವ ಸುಮಾರು 18,000 ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಳೆದ ಗುರುವಾರದಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನೋಂದಣಿಯೂ ಆರಂಭವಾಗಿದೆ. ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಂಕಷ್ಟದಲ್ಲಿರುವ ಭಾರತೀಯ ನಾಗರಿಕರಿಗೆ ಸಹಾಯವಾಣಿ ಸ್ಥಾಪಿಸಿದೆ. ಜೊತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.
Laxmi News 24×7