ಚೆನ್ನೈ (ತಮಿಳುನಾಡು): ಖ್ಯಾತ ನಟಿ ಜಯಪ್ರದಾ ಅವರ ಇಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವಿನಾಯಿತಿಯೊಂದನ್ನು ನೀಡಲು ಸಜ್ಜಾಗಿದೆ.
ಕಾರ್ಮಿಕರಿಗೆ ನೀಡಬೇಕಾದ ಬಾಕಿ ಇರುವ ಇಎಸ್‌ಐ ಅನ್ನು ಸಂಪೂರ್ಣವಾಗಿ ಪಾವತಿಸಿದರೆ, ನಟಿಗೆ ವಿಧಿಸಲಾದ 6 ತಿಂಗಳ ಜೈಲುಶಿಕ್ಷೆಯನ್ನು ರದ್ದುಗೊಳಿಸುವುದಾಗಿ ಹೇಳಿದೆ.
ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಪ್ರಸಿದ್ಧ ನಟಿ, ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನೈನ ಅಣ್ಣಾಸಲೈನಲ್ಲಿ ರಾಮ್ಕುಮಾರ್ ಮತ್ತು ರಾಜ್ಬಾಬು ಅವರೊಂದಿಗೆ ಥಿಯೇಟರ್ ನಡೆಸುತ್ತಿದ್ದಾರೆ. ಆದ್ರೆ ಕೆಲ ವರ್ಷಗಳಿಂದ ಥಿಯೇಟರ್ ಕಾರ್ಮಿಕರಿಗೆ ಇಎಸ್‌ಐ ಹಣವನ್ನು ಪೂರೈಸಿಲ್ಲ ಎಂಬ ಆರೋಪ ಹೊತ್ತಿದ್ದಾರೆ. ಕಾನೂನು ಹೋರಾಟ ನಡೆಸುತ್ತಿರುವ ನಟಿಗೆ 6 ತಿಂಗಳ ಜೈಲುಶಿಕ್ಷೆಯನ್ನೂ ವಿಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮುಂದುವರಿದಿದೆ.
1991 ರಿಂದ 2002ರ ವರೆಗೆ 8,17,000 ರೂ., 2002ರಿಂದ 2005ರ ವರೆಗೆ 1,58,000 ರೂ. ಮತ್ತು ಕಾರ್ಮಿಕರ ಸರ್ಕಾರಿ ವಿಮಾ ನಿಗಮದ ಪರವಾಗಿ 2003 ರಿಂದ ಸಂಗ್ರಹಿಸಲಾದ ಇಎಸ್‌ಐ ಹಣವನ್ನು ಕಾರ್ಮಿಕರಿಗೆ ಕೊಡದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐ) ಕೂಡ ಎಗ್ಮೋರ್ ನ್ಯಾಯಾಲಯದಲ್ಲಿ ಐದು ಪ್ರಕರಣಗಳನ್ನು ದಾಖಲಿಸಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ, ಕಾರ್ಮಿಕರಿಗೆ ವಿಮಾ ಹಣವನ್ನು ಹಿಂದಿರುಗಿಸಲು ಸಿದ್ಧರಿದ್ದೇವೆ ಎಂದು ಜಯಪ್ರದಾ ಪರ ವಕೀಲರು ತಿಳಿಸಿದ್ದರು. ಆದರೆ, ಇಎಸ್‌ಐ ಹಣ ಪಾವತಿಯಾಗದ ಕಾರಣ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಇಎಸ್‌ಐ ಸಂಸ್ಥೆ ಹೇಳಿಕೊಂಡಿದೆ.
ಆಗಸ್ಟ್ 10 ರಂದು, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಎಗ್ಮೋರ್ ನ್ಯಾಯಮಂಡಳಿ ಜೈಲುಶಿಕ್ಷೆ ತೀರ್ಪು ನೀಡಿತ್ತು. ನಟಿ ಜಯಪ್ರದಾ ಸೇರಿದಂತೆ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು (ಜಾಮೀನು ರಹಿತ) ವಿಧಿಸಿತ್ತು. ಜೊತೆಗೆ, 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ನಂತರ, ನಟಿ ಜಯಪ್ರದಾ ಅವರು ಎಗ್ಮೋರ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.