Breaking News

ದಸರಾ ದರ್ಶಿನಿ: ನವರಾತ್ರಿ ಹಿನ್ನೆಲೆ ದೇವಾಲಯ ದರ್ಶನಕ್ಕೆ ಕೆಎಸ್‌ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್

Spread the love

ಮಂಗಳೂರು : ನವರಾತ್ರಿ ಹಬ್ಬದ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯ ದರ್ಶನಕ್ಕೆ ಕಳೆದ ವರ್ಷ ಕೆಎಸ್​​ಆರ್​ಟಿಸಿಯಿಂದ ದಸರಾ ದರ್ಶಿನಿ ಎಂಬ ಪ್ಯಾಕೇಜ್ ಆರಂಭಿಸಲಾಗಿತ್ತು. ಇದಕ್ಕೆ ಜನರ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಸ್​​ಆರ್​ಟಿಸಿ ಈ ಬಾರಿಯು ದಸರಾ ದರ್ಶಿನಿ ಆರಂಭಿಸಿದೆ.

ದೇವಾಲಯ ದರ್ಶನಕ್ಕೆ ಕೆಎಸ್​​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್​ : ನವರಾತ್ರಿ ಸಮಯದಲ್ಲಿ ದೇವಿ ದೇವಾಲಯಗಳ ದರ್ಶನ ಮಾಡುವುದು ಸಾಮಾನ್ಯ. ದೇಗುಲ ದರ್ಶನ ಮಾಡುವ ಭಕ್ತರಿಗೆ ಎಂದೇ ಮಂಗಳೂರಿನಲ್ಲಿ ಕೆಎಸ್​​ಆರ್​ಟಿಸಿ ಇದೀಗ ದಸರಾ ದೇಗುಲ ದರ್ಶನ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ. ಕಳೆದ ಬಾರಿ ಈ ಯೋಜನೆ ಯಶಸ್ವಿಗೊಂಡಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ದೇಗುಲ ದರ್ಶನ ಪ್ಯಾಕೇಜ್ ಅನ್ನು ಮುಂದುವರಿಸಲಾಗಿದೆ.

ವಿವಿಧ ಪ್ಯಾಕೇಜ್​ಗಳ ವಿವರ : ಈ ಬಾರಿಯ ದಸರಾಗೆ ಮಂಗಳೂರು ಕೆಎಸ್​​ಆರ್​ಟಿಸಿಯಿಂದ ಮೂರು ವಿಶೇಷ ಪ್ಯಾಕೇಜ್​ಗಳನ್ನು ಆರಂಭಿಸಲಾಗಿದೆ. ಒಂದನೇ ಪ್ಯಾಕೇಜ್​ನಲ್ಲಿ ದಸರಾ ದರ್ಶಿನಿ ಮೂಲಕ ಮಂಗಳೂರಿನ ಒಂಬತ್ತು ದೇವಿ ದೇಗುಲಗಳ ದರ್ಶನ ಮಾಡಿಸಲಾಗುತ್ತದೆ‌. ಈ ಪ್ಯಾಕೇಜ್​ನಲ್ಲಿ ಮಂಗಳಾದೇವಿ, ಪೊಳಲಿ, ಸುಂಕದಕಟ್ಟೆ, ಕಟೀಲು, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಈ ಪ್ಯಾಕೇಜ್ ನರ್ಮ್ ಬಸ್​​ನಲ್ಲಿ ಪ್ರತೀ ಪ್ರಯಾಣಿಕನಿಗೆ 400 ರೂ. ದರ ಇದ್ದರೆ, ವೋಲ್ವೋ ಬಸ್​ಗೆ 500 ರೂ. ದರ ನಿಗದಿಪಡಿಸಲಾಗಿದೆ. 6-12 ವರ್ಷಗಳ ಮಕ್ಕಳಿಗೆ 300 ರೂ. ನಿಗದಿಪಡಿಸಲಾಗಿದೆ.

ಮತ್ತೊಂದು ಪ್ಯಾಕೇಜ್​ನಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿದೇಗುಲ ದರ್ಶನ ಮಾಡಿಸಲಾಗುತ್ತದೆ‌. ಇದಕ್ಕೆ ಓರ್ವ ಪ್ರಯಾಣಿಕನಿಗೆ 500 ರೂ. ದರ ವಿಧಿಸಲಾಗಿದೆ. ಮತ್ತೊಂದು ಮಡಿಕೇರಿ ಪ್ಯಾಕೇಜ್ ಆಗಿದ್ದು, ಇದರಲ್ಲಿ ರಾಜಾಸೀಟ್, ಅಬ್ಬಿಪಾಲ್ಸ್, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಂಗಳಿಗೆ ಕೊಂಡೊಯ್ಯಲಾಗುತ್ತದೆ. ವಯಸ್ಕರಿಗೆ 500 ರೂ. ದರ ವಿಧಿಸಲಾಗಿದೆ.

ಮಂಗಳೂರಿನ ಸುತ್ತಮುತ್ತಲಿನ ದೇವಾಲಯಗಳಿಗೆ ವೋಲ್ವೊ, ನರ್ಮ್ ಬಸ್​ಗಳಲ್ಲಿ ವಿಶೇಷ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ. ಅ.15 ರಿಂದ 24ರವರೆಗೆ ಈ ನಾಲ್ಕು ಪ್ಯಾಕೇಜ್ ಇರಲಿದೆ‌. ಜನರ ಬೇಡಿಕೆ ಹೆಚ್ಚಿದ್ದಲ್ಲಿ ಅ.30ರವರೆಗೆ ವಿಸ್ತರಿಸಲಾಗುತ್ತದೆ. 25 ಕೆಎಸ್‌ಆರ್​ಟಿಸಿ ಬಸ್​ಗಳನ್ನು ಈ ವಿಶೇಷ ಪ್ಯಾಕೇಜ್​ಗೆ ಮೀಸಲಿರಿಸಲಾಗಿದೆ. ಈ ಪ್ಯಾಕೇಜ್​ನಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ. ಎಲ್ಲರೂ ಪೂರ್ಣ ದರ ನೀಡಿಯೇ ಪ್ರಯಾಣಿಸಬೇಕಾಗುತ್ತದೆ. ಒಟ್ಟಿನಲ್ಲಿ ಕೆಎಸ್‌ಆರ್​ಟಿಸಿ ಒಂದೇ ದಿನದಲ್ಲಿ ಹಲವಾರು ದೇಗುಲಗಳ ದರ್ಶನಗಳಿಗೆ ಅವಕಾಶ ನೀಡಿರುವುದು ವಿಶೇಷವೆನಿಸಿದೆ.

ಕೆಎಸ್​​ಆರ್​ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಎರಡನೇ ವರ್ಷದಲ್ಲಿ ದಸರಾ ದರ್ಶಿನಿ ಆರಂಭಿಸಿದ್ದೇವೆ. ಕೊಲ್ಲೂರು ಮತ್ತು ಸ್ಥಳೀಯ ಎರಡು ಪ್ಯಾಕೇಜ್​ಗಳಲ್ಲಿ ದೇವಾಲಯಗಳ ದರ್ಶನ ಆರಂಭಿಸಲಾಗಿದೆ. ಕಳೆದ ವರ್ಷ ಈ ಪ್ಯಾಕೇಜ್ ಬಹಳ ಯಶಸ್ವಿ ಆಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಜನರ ಸ್ಪಂದನೆ ಸಿಕ್ಕಿದೆ. ಅಕ್ಟೋಬರ್ 19 ರಿಂದ ಗೆಜ್ಜೆಗಿರಿಗೆ ಹೋಗುವ ಪ್ಯಾಕೇಜ್ ಆರಂಭಿಸುತ್ತೇವೆ. ಕಳೆದ ವರ್ಷ ದೀಪಾವಳಿಗೆ ಮಾಡಲಾದ ಕೊಲ್ಲೂರು ಮತ್ತು ಮಡಿಕೇರಿಗೆ ಹೋಗುವ ಪ್ಯಾಕೇಜ್​ ಸೇರಿಸಲಾಗಿದೆ ಎಂದು ಹೇಳಿದರು.

ಪ್ರಯಾಣಿಕೆ ಶಶಿಕಲಾ ಮಾತನಾಡಿ, ಕೆಎಸ್​​ಆರ್​ಟಿಸಿಯ ಬಸ್​ ವ್ಯವಸ್ಥೆಯಿಂದ ಎಲ್ಲ ದೇವಸ್ಥಾನ ನಮಗೆ ನೋಡಲು ಅವಕಾಶ ಸಿಗುತ್ತದೆ. ಈ ಪ್ಯಾಕೇಜ್​ ನಿಂದ ತುಂಬಾ ಖುಷಿಯಾಗಿದೆ. ನವರಾತ್ರಿಗೆ ಒಂದೇ ದಿನ 9 ದೇವಸ್ಥಾನ ನಮಗೆ ನೋಡಲು ಆಗುತ್ತದೆ. ಕಳೆದ ವರ್ಷವೂ ಈ ಪ್ಯಾಕೇಜ್​ನಲ್ಲಿ ಸಂಚರಿಸಿದ್ದೆವು ಎಂದು ಹೇಳಿದರು.

ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣ : ಮಹಿಳಾಮಣಿಯರೇ ಅಧಿಕ ಮಂದಿ ದಸರಾ ದರ್ಶಿನಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಉತ್ಸಾಹ ಹುಮ್ಮಸ್ಸಿನಿಂದಲೇ ದೇಗುಲ ದರ್ಶನಕ್ಕೆ ಹೊರಟಿದ್ದಾರೆ. ಒಟ್ಟು ನಾಲ್ಕು ಪ್ಯಾಕೇಜ್​ಗಳಲ್ಲಿ ‘ಪಂಚದುರ್ಗಾ ದರ್ಶನ’ ಹೊರತುಪಡಿಸಿ ಮೂರು ಪ್ಯಾಕೇಜ್​ಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ಅಕ್ಟೋಬರ್ 19ರಂದು ಗೆಜ್ಜೆಗಿರಿ ಹಾಗೂ ಪುತ್ತೂರು ಆಸುಪಾಸಿನ ದೇವಾಲಯಗಳ ವಿಶೇಷ ಪ್ಯಾಕೇಜ್ ಆರಂಭವಾಗಲಿದೆ. ಈ ಪ್ಯಾಕೇಜ್ ನರ್ಮ್ ಬಸ್ ನಲ್ಲಿ ಪ್ರತೀ ಪ್ರಯಾಣಿಕನಿಗೆ 400 ರೂ. ದರ ಇದ್ದರೆ, ವೋಲ್ವೋ ಬಸ್​ಗೆ 500 ರೂ. ದರ ನಿಗದಿಪಡಿಸಲಾಗಿದೆ. 6-12 ವರ್ಷಗಳ ಮಕ್ಕಳಿಗೆ 300 ರೂ. ದರ ವಿಧಿಸಲಾಗಿದೆ. ಒಟ್ಟಿನಲ್ಲಿ ಕಡಿಮೆ ಬಜೆಟ್​ನಲ್ಲಿ ಒಂದೇ ದಿನ ಹಲವು ದೇವಾಲಯಗಳ ದರ್ಶನ ಇರುವುದರಿಂದ ಉತ್ತಮ ಸ್ಪಂದನೆಯಿದೆ. ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಸ್ಪಂದನೆ ದೊರಕುವ ಸಾಧ್ಯತೆ ಇದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ