ಹಾವೇರಿ: ಸಾಮಾನ್ಯವಾಗಿ ಚಿತ್ರಕಲಾವಿದರು ಬೆರಳುಗಳ ಸಹಾಯದಿಂದ ಕುಂಚದಲ್ಲಿ ಚಿತ್ರಗಳನ್ನ ಬಿಡಿಸುವುದನ್ನು ನೋಡಿದ್ದೇವೆ.
ಕೆಲವರು ಬೆರಳುಗಳಲ್ಲಿ ಕುಂಚ ಕಟ್ಟಿಕೊಂಡು ಚಿತ್ರಬಿಡಿಸುವುದು ಉಂಟು. ಇನ್ನೂ ಕೆಲವರು ತಮ್ಮ ಮೂಗಿನ ಸಹಾಯದಿಂದ ಸಹ ಚಿತ್ರ ಬಿಡಿಸುತ್ತಾರೆ. ಆದರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ವಿಭಿನ್ನ ಯುವ ಕಲಾವಿದನಿದ್ದಾನೆ..
ಚೆನ್ನಬಸಪ್ಪ ತೊಪ್ಪಲದ ಹೆಸರಿನ ಈ ಕಲಾವಿದ ಎಲ್ಲರಂತೆ ಕುಂಚದಿಂದ ಚಿತ್ರ ಬಿಡಿಸುವುದಿಲ್ಲ. ಬದಲಿಗೆ ತನ್ನ ನಾಲಿಗೆಯನ್ನೇ ಕುಂಚವನ್ನಾಗಿ ಮಾಡಿಕೊಂಡು ಚಿತ್ರ ಬಿಡಿಸುತ್ತಾನೆ. 18 ವರ್ಷದ ಈ ಯುವಕ ಹೆಚ್ಚು ಬಳಸುವುದು ಕಪ್ಪುಬಣ್ಣ. ಬಿಳಿಯ ಹಾಳಿಗಳನ್ನೇ ಕ್ಯಾನ್ವಾಸ್ ಮಾಡಿಕೊಳ್ಳುವ ಈ ಯುವಕ ನೋಡು ನೋಡುತ್ತಲೇ ಚಿತ್ರಗಳನ್ನು ಅರಳಿಸುತ್ತಾನೆ.
ಗೋಡೆಯ ಮೇಲೆ, ತನ್ನ ತೊಡೆಯ ಮೇಲೆ ಬಿಳಿ ಹಾಳಿ ಇಟ್ಟುಕೊಂಡು ಈ ಯುವಕ ಚಿತ್ರ ಬಿಡಿಸುತ್ತಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ವರನಟ ರಾಜಕುಮಾರ್, ದಿವಂಗತ ನಟ ಪುನೀತರಾಜಕುಮಾರ್, ಮದರ್ ತೆರೇಸಾ, ಫುಟ್ಬಾಲ್ ಆಟಗಾರ ಮೆಸ್ಸಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರ ಚಿತ್ರಗಳು ಇವನ ನಾಲಿಗೆಯಿಂದ ಅರಳಿವೆ. ಅಷ್ಟೇ ಅಲ್ಲದೆ ಕೈಯಿಂದ ಕುಂಚ ಬಳಸಿ ಸಹ ಈ ಕಲಾವಿದ ಚಿತ್ರಬಿಡಿಸುತ್ತಾನೆ.
ಇವರ ಇನ್ನೊಂದು ಪ್ರಯೋಗವೆಂದರೆ ತಲೆಯನ್ನು ಕೆಳಗೆ ಮಾಡಿ ಕುಂಚದಿಂದ ಚಿತ್ರಬಿಡಿಸುವುದಾಗಿದೆ. ಕಾಲಿನಲ್ಲಿ ಕುಂಚ ಹಿಡಿದು ಸಹ ಇವರು ಚಿತ್ರ ಬಿಡಿಸುತ್ತಾರೆ. ಇನ್ನು ಚಮಚ, ಕುಕ್ಕರ್ ಹ್ಯಾಂಡಲ್‌ಗಳನ್ನ ಬಳಸಿ ಈ ಕಲಾವಿದ ಚಿತ್ರ ಬಿಡಿಸಿದ್ದಾರೆ. ಚೆನ್ನಬಸಪ್ಪ ಮೊದಲ ಪ್ರಾಶಸ್ತ್ಯ ನೀಡುವುದು ದೇವರ ಚಿತ್ರಗಳಿಗೆ. ಹೌದು ಈಶ್ವರ, ಆಂಜನೇಯ, ಪರಮೇಶ್ವರ್, ಬುದ್ಧ, ಶ್ರೀರಾಮ ಸೇರಿದಂತೆ ವಿವಿಧ ಚಿತ್ರಗಳನ್ನು ಚೆನ್ನಬಸಪ್ಪ ಬಿಡಿಸಿದ್ದಾರೆ.
ನಾನು ಯಾವುದೇ ಗುರುಗಳ ಸಹಾಯವಿಲ್ಲದೆ ಈ ಚಿತ್ರಕಲೆ ಬಿಡಿಸುವುದನ್ನು ಕಲಿಯುತ್ತಿದ್ದೇನೆ. ಕಲಿಯುವುದು ಬಹಳಷ್ಟಿದ್ದು, ಈಗ ಆರಂಭಿಸಿದ್ದೇನೆ. ಕಲೆಯಲ್ಲಿ ಇನ್ನೂ ಹೆಚ್ಚು ಪಳಗಬೇಕು. ಇದಕ್ಕಾಗಿ ರಾತ್ರಿ ಎರಡು ಗಂಟೆಯವರೆಗೆ ಚಿತ್ರ ಬಿಡಿಸುತ್ತಿದ್ದೇನೆ ಎನ್ನುತ್ತಾರೆ ಚೆನ್ನಬಸಪ್ಪ.
ಐಟಿಐ ವ್ಯಾಸಂಗ ಮಾಡುತ್ತಿರುವ 18 ವರ್ಷದ ಚೆನ್ನಬಸಪ್ಪನಿಗೆ ಮೊದಲಿನಿಂದಲೂ ಚಿತ್ರ ಬಿಡಿಸುವ ಹವ್ಯಾಸ. ವ್ಯಾಸಂಗದ ಬಗ್ಗೆ ನನಗೆ ಹೆಚ್ಚು ಒಲುವಿಲ್ಲಾ. ನಾನೊಬ್ಬ ಕಲಾವಿದನಾಗಬೇಕು ಎಂಬ ಆಸೆ ನನಗಿದೆ. ಎಲ್ಲರೂ ಕುಂಚದಲ್ಲಿ ಚಿತ್ರ ಬಿಡಿಸುವುದು ಸಾಮಾನ್ಯ. ಆದರೆ ನಾನು ಚಿತ್ರಕಲೆಯಲ್ಲಿ ವಿಭಿನ್ನ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ನಾಲಿಗೆಯನ್ನೇ ಕುಂಚ ಮಾಡಿಕೊಂಡು ಚಿತ್ರ ಬಿಡಿಸುತ್ತೇನೆ ಎಂದು ಚೆನ್ನಬಸಪ್ಪ ತಿಳಿಸುತ್ತಾರೆ.