ಬೆಂಗಳೂರು: ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಮುಂದುವರೆದಿದ್ದು, ಕಂತೆ ಕಂತೆ ನಗದು ಹಣ ಪತ್ತೆಯಾಗುತ್ತಲೇ ಇದೆ.
ಭಾನುವಾರ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್‌ವೊಬ್ಬರ ಅಪಾರ್ಟ್‌ಮೆಂಟ್ ಮೇಲೆ ನಡೆಸಿದ ದಾಳಿ ವೇಳೆ 40 ಕೋಟಿ ರೂ.ಗಿಂತ ಅಧಿಕ ನಗದು ಸಿಕ್ಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಗುತ್ತಿಗೆದಾರ ಸಂತೋಷ ಕೃಷ್ಣಪ್ಪ ಅವರ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಇಷ್ಟೊಂದು ಹಣ ಪತ್ತೆಯಾಗಿದೆ. ಈ ಹಣ ಹಣ ಪತ್ತೆಯಾಗುತ್ತಿದ್ದಂತೆ 6ಕ್ಕೂ ಹೆಚ್ಚು ಕಾರುಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿಯೊಬ್ಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್‌ಸಿ ಸಂಬಂಧಿಕರನ್ನು ಫ್ಲ್ಯಾಟ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಗುತ್ತಿಗೆದಾರ ಸಂತೋಷ ನಿವಾಸದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಇಡೀ ದಿನ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಫ್ಲ್ಯಾಟ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ದಾಳಿ ಸಂದರ್ಭಗಳಲ್ಲಿ 32 ಬಾಕ್ಸ್‌ಗಳಲ್ಲಿ 40 ಕೋಟಿ ರೂ.ಗಿಂತಲೂ ಅಧಿಕ ಹಣ ಸಿಕ್ಕಿದೆ.