ಧಾರವಾಡ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನಡ್ಡಾ ಅವರು ಮತದಾರರಿಗೆ ಆಮಿಷ ಒಡ್ಡಿದ್ದಾರೆಂದು ದೂರು ದಾಖಲಿಸಲಾಗಿತ್ತು. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾಷಣ ಮಾಡುವಾಗ ಮತದಾರರ ಮೇಲೆ ಪ್ರಧಾನಿ ಮೋದಿ ಆಶೀರ್ವಾದ ಇರುತ್ತೆ ಎಂದು ಅವರು ಹೇಳಿದ್ದರು. ಈ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಲಕ್ಷ್ಮಣ ನಂದಿ ಎನ್ನುವವರು ದೂರು ದಾಖಲಿಸಿದ್ದರು.
2023ರ ಮೇ 1ರಂದು ಅಂದಿನ ಮುಖ್ಯಮಂತ್ರಿ ಹಾಗೂ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಭಾಷಣ ಮಾಡುವಾಗ ನಡ್ಡಾ ಈ ರೀತಿ ಹೇಳಿದ್ದರು. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ತಡೆ ಕೋರಿ ನಡ್ಡಾ ಪರ ವಕೀಲರು ಧಾರವಾಡ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನಯ ನವೆಂಬರ್ 3ಕ್ಕೆ ಮುಂದೂಡಲಾಗಿದೆ.
ವಕೀಲ ವಿನೋದ ಕುಮಾರ್ ಮಾತನಾಡಿ, ಜೆ.ಪಿ.ನಡ್ಡಾ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಮೋದಿಯವರ ಆಶೀರ್ವಾದ ಇದ್ದರೆ ಅಭಿವೃದ್ಧಿ ಚೆನ್ನಾಗಿ ನಡೆಯುತ್ತೆ. ಅವರ ಆಶೀರ್ವಾದದಿಂದ ವಂಚಿತರಾಗಬೇಡಿ. ಅದಕ್ಕೋಸ್ಕರ ಬಿಜೆಪಿಗೆ ವೋಟು ಕೊಡಿ ಎಂದಿದ್ದರು. ಇದು ಮತದಾರರಿಗೆ ಒಡ್ಡಿದ ಆಮಿಷ ಎಂದು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ 171 ಸಿ ಹಾಗೂ 171 ಎಫ್ ಮತ್ತು 123 ರೆಪ್ರರೆಂಟೇಷನ್ ಆಫ್ ಪೀಪಲ್ ಆಯಕ್ಟ್ ಮೂಲಕ ಎಫ್ಐಆರ್ ದಾಖಲಿಸಲಾಗಿತ್ತು.
ಈ ಪ್ರಕರಣವನ್ನು ರದ್ದುಪಡಿಸಬೇಕು ಎಂದು ನಾವು ಉಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿದ್ದೆವು. ಈ ಹೇಳಿಕೆಯಲ್ಲಿ ಯಾವುದೇ ರೀತಿಯ ಆಮಿಷ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಮತ ಕೇಳುವುದು ನಮ್ಮ ಹಕ್ಕು. ಅದೇ ರೀತಿ ಅವರು ಮತ ಕೇಳಿದ್ದಾರೆ. ಎಫ್ಐಆರ್ ದಾಖಲಾತಿಗೆ ಮ್ಯಾಜಿಸ್ಟ್ರೇಟ್ರಿಂದ ಅನುಮತಿ ಬೇಕು. ಆ ಅನುಮತಿಗೆ ಅದರದ್ದೇ ಆದ ವಿಧಾನಗಳಿವೆ. ಈ ವಿಧಾನವನ್ನು ಬಿಟ್ಟು ಪೊಲೀಸರೇ ಹೋಗಿ ಮ್ಯಾಜಿಸ್ಟ್ರೇಟ್ರಿಂದ ಪರ್ಮಿಷನ್ ತೆಗೆದುಕೊಂಡು ಬಂದಿದ್ದಾರೆ. ಆ ಪರ್ಮಿಷನ್ ಅನ್ನು ಯಾರು ದೂರು ಕೊಡುತ್ತಾರೋ ಅವರು ತೆಗೆದುಕೊಂಡು ಬರಬೇಕು ಅಂತ ಕಾನೂನಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದೆವು. ಲಕ್ಷ್ಮಣ ನಂದಿ ಎನ್ನುವವರು ದೂರು ಕೊಟ್ಟಿದ್ದರು. ಇವತ್ತು ನಮ್ಮ ವಾದ ಆಲಿಸಿದ ಜಸ್ಟಿಸ್ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತನಿಖೆಗೆ ಮಧ್ಯಂತರ ತಡೆ ನೀಡಿದೆ ಎಂದರು.