ಚಿಕ್ಕೋಡಿ : ಕೇಂದ್ರದಿಂದ ಬರುವ ವಿದ್ಯುತ್ ಹಠಾತ್ತನೆ ನಿಲ್ಲಿಸಿದ ಪರಿಣಾಮವಾಗಿ ರಾಜ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸೋಮವಾರ ಸಂಜೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಅಭಾವ ಕಂಡುಬಂದಿದೆ. ನೀರಿನ ಅಭಾವದಿಂದ ಕೆಲವು ಕಡೆ ವಿದ್ಯುತ್ ತಯಾರಿಕೆ ಆಗುತ್ತಿಲ್ಲ. ವಿಜಯಪುರ, ರಾಯಚೂರು ವಿದ್ಯುತ್ ತಯಾರಿಕಾ ಘಟಕಗಳು ರಿಪೇರಿ ಇರುವುದರಿಂದ ನಮಗೆ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡೋದಾಗಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡೋದಾಗಿ ಹೇಳಿದ್ದೆ. ಶಾಸಕರ ಬಳಿ ಮಾತನಾಡಿ ದಿನಾಂಕ ನಿಗದಿ ಮಾಡಿ ಸದ್ಯದಲ್ಲೇ ಚಿಕ್ಕೋಡಿ ಮತ್ತು ವಿವಿಧ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡಲಾಗುವುದು. ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ. ಶೀಘ್ರವೇ ಚಿಕ್ಕೋಡಿಯಲ್ಲಿಯೂ ಸಭೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರ ಬರ ಅಧ್ಯಯನ ತಂಡ ಚಿಕ್ಕೋಡಿ ಉಪವಿಭಾಗಕ್ಕೆ ಭೇಟಿ ನೀಡದ ವಿಚಾರವಾಗಿ ಮಾತನಾಡಿ, ಬರ ಅಧ್ಯಯನ ತಂಡ 194 ತಾಲೂಕುಗಳಿಗೂ ಹೋಗಲ್ಲ, ರ್ಯಾಂಡಮ್ ಆಗಿ ಚೆಕ್ ಮಾಡ್ತಾರೆ. ಈಗಾಗಲೇ ಬರಪೀಡಿತ ತಾಲೂಕುಗಳ ಘೋಷಣೆಯಾಗಿದೆ. ಇಲ್ಲಿ ಬರಬೇಕು ಅಂತೇನಿಲ್ಲ. ಲಿಮಿಟೆಡ್ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಹೋಗಿದೆ. ಬರ ಘೋಷಣೆ ಮಾಡಿದ್ದು ಅದರ ಲಾಭ ಏನು ಸಿಗಬೇಕು, ಇಲ್ಲೂ ಸಿಗುತ್ತೆ. ಅಧಿಕಾರಿಗಳು ಬರದೇ ಹೋದ್ರೆ ತಾರತಮ್ಯ ಅಂತೇನಿಲ್ಲ. ಗೋಕಾಕ್, ಮೂಡಲಗಿಗೂ ಬಂದಿಲ್ಲ. ಅದಕ್ಕೂ ಇದಕ್ಕೂ ಲಿಂಕ್ ಮಾಡೋದು ಅವಶ್ಯಕತೆ ಇಲ್ಲ ಎಂದರು.
ಕೇಂದ್ರ ಬರ ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಬಿಜೆಪಿ ನಾಯಕರ ಆರೋಪ ವಿಚಾರ ಮಾತನಾಡಿ, ನಾವು ಅಧಿಕಾರಿಗಳಿಗೆ ಮನವರಿಕೆ ಮಾಡೋದಲ್ಲ ಅವರಿಗೆ ಆಗಬೇಕು. ನಾವು ಉಪಸಮಿತಿಯಲ್ಲಿ ಹೇಳಿದ್ದೇವೆ. ಸಿಎಂ ಸಭೆ ಮಾಡಿ ಹೇಳಿದ್ದಾರೆ. ನಾವು ಮನವರಿಕೆ ಮಾಡಿ ಹೇಳೋದಲ್ಲ. ಅವರಿಗೆ ತಿಳಿಯಬೇಕು. ಸ್ವಂತಕ್ಕೆ ನಾವು ಹೇಳಿದ್ರೆ ವರದಿ ಕೊಡಲ್ಲ. ವಸ್ತುಸ್ಥಿತಿ ಇದ್ರೆ ಮಾತ್ರ ವರದಿ ಕೊಡ್ತಾರೆ. ಇನ್ಫ್ಲೂಯೆನ್ಸ್ ಮಾಡೋ ಅವಶ್ಯಕತೆ ಇಲ್ಲ. ನಿಜವಾದ ವರದಿ ಅವರೇ ಕೊಡ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಎಂಟ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಬರಗಾಲ ಸಮಯದಲ್ಲಿ ಇದು ಬೇಕಿತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅದು ಅವರ ವೈಯಕ್ತಿಕ, ಅವರು ಟ್ಯೂಷನ್ ಹೇಳ್ತಾರೆ, ಅದು ಅವರ ವೃತ್ತಿ. ಅದಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲ. ಅವರದ್ದೇ ಆದ ಪ್ರೊಫೆಷನ್ ಇರುತ್ತೆ. ಅದಕ್ಕೆ ನಾವು ಕಮೆಂಟ್ ಮಾಡಕ್ಕಾಗಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದರು.
ಕಾಮಗಾರಿ ಮುಗಿಸಿದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ವಿಚಾರವಾಗಿ ಪ್ರತಿಕ್ರಿಯಿಸಿ,ಉಳಿಸಿ ಹೋದವರು ಯಾರು? ಅದನ್ನ ಕೇಳಬೇಕಲ್ವಾ? ನಾವು ಉಳಿಸಿದ್ರೆ ಐದು ವರ್ಷಗಳ ನಂತರ ಆ ಪ್ರಶ್ನೆ ಕೇಳಿ, ಈಗ ಬಿಜೆಪಿಯವರನ್ನ ಪ್ರಶ್ನೆ ಮಾಡಬೇಕು, ಪಿಡಬ್ಲ್ಯೂಡಿ ಇಲಾಖೆಯಲ್ಲಿ 6 ಸಾವಿರ ಕೋಟಿ, ನೀರಾವರಿ ಇಲಾಖೆಯಲ್ಲಿ 12 ಸಾವಿರ ಕೋಟಿ ಇದೆ. ಉಳಿಸಿ ಹೋದವರು ಬಿಜೆಪಿಯವರು. ನಮ್ಮನ್ನು ಕೇಳಿದ್ರೆ ಏನ್ ಉತ್ತರ ಕೊಡೋದು? ಎಂದರು.