ಬೆಂಗಳೂರು : ಬಿಎಂಟಿಸಿ ಬಸ್ ಹರಿದ ಪರಿಣಾಮ ಮೂರು ವರ್ಷದ ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಗಾರ್ವೇಭಾವಿಪಾಳ್ಯ ಜಂಕ್ಷನ್ನಲ್ಲಿ ನಡೆದಿದೆ.
ಆಯಾನ್ ಪಾಷಾ (3) ಮೃತ ಮಗು ಎಂದು ಗುರುತಿಸಲಾಗಿದೆ.
ಆಯಾನ್ ಪಾಷಾ ದೊಡ್ಡಮ್ಮ ರುಸ್ಮಾರೊಂದಿಗೆ ಭಾನುವಾರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದನು. ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿಯಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗೆ ಬಿದ್ದಿದ್ದು, ಈ ವೇಳೆ ಬಸ್ನ ಚಕ್ರ ಮಗುವಿನ ತಲೆ ಮೇಲೆ ಹರಿದಿದೆ.
ತಲೆ ಮೇಲೆ ಬಸ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ದೊಡ್ಡಮ್ಮ ರುಸ್ಮಾ ಅವರು ಮಗುವನ್ನು ತಮ್ಮ ಮಡಿಲಿನಲ್ಲಿ ಎತ್ತುಕೊಂಡು ರೋದಿಸತೊಡಗಿದರು. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.