ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ.
ಈ ನಿಟ್ಟಿನಲ್ಲಿ ಕೆಎಂಎಫ್-24ರಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಉತ್ತಮ ಸಾಧನೆ ಮಾಡಿದೆ. ಅವಳಿ ನಗರದ ಎಲ್ಲ ಸ್ಥಿರಾಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಕೆಎಂಎಫ್ (ಕರ್ನಾಟಕ ಮುನ್ಸಿಪಲ್ ಫೈನಾನ್ಸ್)-24 ಆನ್‌ಲೈನ್ ಅಪ್ಲಿಕೇಷನ್ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಎಲ್ಲ ಸ್ಥಿರಾಸ್ತಿಗಳನ್ನು ತೆರಿಗೆ (ಆಸ್ತಿ ಕರ) ವ್ಯಾಪ್ತಿಗೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯವು ಕೆಎಂಎಫ್-24 ಆನ್‌ಲೈನ್ ಅಪ್ಲಿಕೇಷನ್ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಪ್ರಕ್ರಿಯೆಯು ಡಿಜಿಟೈಸ್ಡ್ ಎಣಿಕೆ ಹಾಗೂ ಪರಿಶೀಲಿಸಲಾದ ಸಂಚಿತ ಎಣಿಕೆ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ.
ಹು-ಧಾ ಮಹಾನಗರ ಪಾಲಿಕೆ ಸಾಧನೆ: ಕೆಎಂಎಫ್-24ರಲ್ಲಿ 3ನೇ ಸ್ಥಾನ3,52,459 ಸ್ಥಿರಾಸ್ತಿಗಳ ಡಿಜಿಟಲೀಕರಣ: ಮೊದಲ ಹಂತದಲ್ಲಿ ಹು-ಧಾ ಮಹಾನಗರ ಪಾಲಿಕೆಯು ಅಕ್ಟೋಬರ್ 3ರ ವರೆಗೆ 3,52,459 ಸ್ಥಿರಾಸ್ತಿಗಳನ್ನು ಡಿಜಿಟಲೀಕರಣಗೊಳಿಸಿದೆ. ಇದಕ್ಕೂ ಮೊದಲು ಪಾಲಿಕೆಯ ಲೆಕ್ಕದಲ್ಲಿ (ತೆರಿಗೆ ಜಾಲದಲ್ಲಿ ) 3,15,425 ಸ್ಥಿರಾಸ್ತಿಗಳಿದ್ದವು. ಇದರಿಂದ ಡಿಜಿಟೈಸ್ಡ್ ಎಣಿಕೆಯಲ್ಲಿ ಪಾಲಿಕೆಯು ಶೇ. 111.74 ರಷ್ಟು ಪ್ರಗತಿಯೊಂದಿಗೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.
ಕೊಡಗು- ಪ್ರಥಮ, ರಾಮನಗರ- ದ್ವಿತೀಯ: ಕೊಡಗು (ಶೇ. 120.7) ಪ್ರಥಮ ಹಾಗೂ ರಾಮನಗರ (ಶೇ. 112. 84) ದ್ವಿತೀಯ ಸ್ಥಾನದಲ್ಲಿದೆ. ಈ ಎರಡು ನಗರಗಳಲ್ಲಿ ಸ್ಥಿರಾಸ್ತಿಗಳ ಸಂಖ್ಯೆ ಬಹಳ ಕಡಿಮೆಯಿವೆ. ಕೆಎಂಎಫ್-24 ಆನ್‌ಲೈನ್ ಅಪ್ಲಿಕೇಷನ್ ಬಳಿಕ ಇಲ್ಲಿಯವರೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ 37 ಸಾವಿರಕ್ಕೂ ಅಧಿಕ ಸ್ಥಿರಾಸ್ತಿಗಳು ತೆರಿಗೆ ಜಾಲದ ವ್ಯಾಪ್ತಿಗೆ ಬಂದಿರುವುದು ಪಾಲಿಕೆಯ ಗಮನಾರ್ಹ ಸಾಧನೆಯಾಗಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಾ ಹೋಗಲಿದೆ. ಬಹಳಷ್ಟು ಅಕ್ರಮ- ಸಕ್ರಮ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿವೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಲಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೋಳಿಕರ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಪಾಲಿಕೆಯು ಹಿಂದಿನ ವರ್ಷಕ್ಕೆ ತುಲನೆ ಮಾಡಿ ಹಾಗೂ ಆಸ್ತಿ ತೆರಿಗೆ ದರ ಏರಿಕೆ ಪ್ರಮಾಣಕ್ಕೆ ಅನುಗುಣವಾಗಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ನಿಗದಿಪಡಿಸುತ್ತಿತ್ತು. ಕೆಎಂಎಫ್-24 ಆನ್ ಲೈನ್ ಅಪ್ಲಿಕೇಷನ್ ಪೂರ್ಣಗೊಂಡ ಬಳಿಕ ಆಸ್ತಿ ತೆರಿಗೆ ವಸೂಲಾತಿಯ ನಿಖರ ಲೆಕ್ಕ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.