ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 19ನೇ ಆರೋಪಿಯಾಗಿರುವ ಇನ್‌ಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಯೋಗೀಶಗೌಡರ ಹತ್ಯೆಯಾದಾಗ ಚೆನ್ನಕೇಶವ ಟಿಂಗರಿಕ ಧಾರವಾಡ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದರು. ಅಲ್ಲದೇ ಪ್ರಕರಣದ ತನಿಖಾಧಿಕಾರಿ ಸಹ ಆಗಿದ್ದರು. ಸಿಬಿಐಗೆ ಈ ಪ್ರಕರಣದ ತನಿಖೆ ಹಸ್ತಾಂತರಗೊಂಡ ನಂತರ ಟಿಂಗರಿಕರ್ ಸಹ ಈ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು ಎಂದು ಸಿಬಿಐ, ಟಿಂಗರಿಕರ್ ಮೇಲೂ ಎಫ್‌ಐಆರ್ ದಾಖಲಿಸಿ ಅವರ ಬಂಧನಕ್ಕೆ ಮುಂದಾಗಿತ್ತು. ಆದರೆ, ಟಿಂಗರಿಕರ್ ಮೊದಲೇ ನಿರೀಕ್ಷಣಾ ಜಾಮೀನು ಪಡೆದು ಬಚಾವ್ ಆಗಿದ್ದರು. ನಿರೀಕ್ಷಣಾ ಜಾಮೀನಿನ ಅವಧಿ ಮುಗಿದ ನಂತರ ಟಿಂಗರಿಕರ್ ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಇವರ ಅರ್ಜಿಯನ್ನು ತಿರಸ್ಕರಿಸಿತ್ತು.
ಮೂರು ಬಾರಿ ವಿಚಾರಣೆಗೆ ಗೈರಾಗಿದ್ದ ಟಿಂಗರಿಕರ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಟಿಂಗರಿಕ ಮೇಲೆ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿತ್ತು.ನಿನ್ನೆ ಧಾರವಾಡದ ಮಲಪ್ರಭಾನಗರದಲ್ಲಿರುವ ಟಿಂಗರಿಕರ್ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಟಿಂಗರಿಕ ಬಂಧನಕ್ಕೆ ಮುಂದಾಗಿದ್ದರು. ಆದರೆ, ಅಧಿಕಾರಿಗಳ ದಿಕ್ಕು ತಪ್ಪಿಸಿ ಪರಾರಿಯಾಗಿದ್ದ ಟಿಂಗರಿಕ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.ಟಿಂಗರಿಕರ್ ಅವರ ಈ ನಡೆ ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆಗೆ ಗೈರಾಗಿದ್ದಕ್ಕೆ, ಓರ್ವ ಪೊಲೀಸ್ ಅಧಿಕಾರಿಯಾಗಿ ವಿಚಾರಣೆಗೆ ನೀವು ಗೈರಾಗಿದ್ದೀರಿ ಎಂದು ಟಿಂಗರಿಕರ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ ಅವರನ್ನು ತನ್ನ ಕಸ್ಟಡಿಗೆ ಪಡೆದುಕೊಂಡಿದೆ.