ರಾಮನಗರ : ಕಾಂಗ್ರೆಸ್ನವರು ಒಂದು ಕಡೆ ಜಾತ್ಯತೀತ ಎನ್ನುತ್ತಾರೆ. ಇನ್ನೊಂದು ಕಡೆ ಜಾತಿಗಣತಿ ವರದಿ ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯ ತಮ್ಮ ತೋಟದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರವು ರಾಜಕೀಯ ಮಾಡುತ್ತಿದೆ. ಕಾಂತರಾಜು ಎಂಬುವರಿಂದ ವರದಿ ಕೊಡಿಸಿದ್ದೀವಿ. ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ..? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ಹಾಗೆಯೇ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ? ಇಲ್ಲ. ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ಒಮ್ಮೆಯೂ ಈ ಬಗ್ಗೆ ಸಿಎಂ ಆಗಿದ್ದ ನನ್ನ ಬಳಿ 14 ತಿಂಗಳಲ್ಲಿ ಚರ್ಚೆ ನಡೆಸಲೇ ಇಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಜಾತಿ ಗಣತಿ ಮುಖ್ಯವಲ್ಲ. ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಪಾದಿಸಿದ ಕುಮಾರಸ್ವಾಮಿ, ಜಾತಿ ಎನ್ನುವ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಜಾತ್ಯತೀತ ಸಮಾಜ ನಿರ್ಮಾಣ ಮಾಡೋಣ ಎಂದು ಭಾಷಣ ಬಿಗಿಯುತ್ತಾರೆ. ಅದರ ಅರ್ಥವೇನು? ಜಾತ್ಯತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕು ಎಂದಲ್ಲವೇ? ಆದರೆ, ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ ಎಂದು ಟೀಕಾಪ್ರಹಾರ ನಡೆಸಿದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಕೊಂಡೇ ಬರುತ್ತಿದೆ. ಇವರು ಜಾತಿಗಣತಿ ಮಾಡಿ ಏನು ಸಾಧನೆ ಮಾಡುತ್ತಾರೆ? ಅದರ ಉಪಯೋಗ ಏನು? ಸಮಾಜ ಒಡೆಯಲು ಜಾತಿ ಗಣತಿ ಮಾಡುತ್ತೀರೋ ಅಥವಾ ಜಾತಿ ಬದಿಗಿಟ್ಟು ಸರ್ವೆ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುತ್ತೀರೋ? ಮೊದಲು ಜನರಿಗೆ ಅದನ್ನು ತಿಳಿಸಿ ಎಂದು ಹೆಚ್ಡಿಕೆ ಆಕ್ರೋಶ ಆಗ್ರಹಿಸಿದರು.