Breaking News

ಅಮೆರಿಕದಲ್ಲಿ ಭಾರತ ಮೂಲದ ಟೆಕ್ಕಿ ದಂಪತಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

Spread the love

ನ್ಯೂಯಾರ್ಕ್​ (ಅಮೆರಿಕ): ನ್ಯೂ ಜೆರ್ಸಿಯಲ್ಲಿ ಭಾರತದ ಉತ್ತರ ಪ್ರದೇಶ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳ ಮೃತದೇಹ ದೊರೆತಿದೆ.

ಇವರ ವಾಸದ ಮನೆಯಲ್ಲೇ ನಾಲ್ವರ ಶವಗಳಿದ್ದವು. ಕೊಲೆ ಹಾಗೂ ಆತ್ಮಹತ್ಯೆ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೇಜ್​ ಪ್ರತಾಪ್​ ಸಿಂಗ್ (43), ಸೋನಾಲ್ ಪರಿಹಾರ್ (42), 10 ವರ್ಷದ ಮಗ ಹಾಗೂ 6 ವರ್ಷದ ಮಗಳು ಮೃತರೆಂದು ಗುರುತಿಸಲಾಗಿದೆ. ಬುಧವಾರ ಸಂಜೆ 4:30ರ ಸುಮಾರಿಗೆ ಇಲ್ಲಿನ ಪ್ಲಾನ್ಸ್‌ಬರೋ ಮನೆಯಲ್ಲಿ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ದೂರವಾಣಿ ಕರೆ ಮೂಲಕ ಸಿಕ್ಕ ಮಾಹಿತಿ ಆಧಾರದ ಮೇಲೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶುಕ್ರವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಯೋಲಾಂಡಾ ಸಿಕ್ಕೋನ್ ಮತ್ತು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಯ ಮುಖ್ಯಸ್ಥ ಎಮಾನ್ ಬ್ಲಾಂಚಾರ್ಡ್ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.

ಸಂಬಂಧಿಯೊಬ್ಬರು ಯೋಗಕ್ಷೇಮ ವಿಚಾರಣೆಗೆಂದು ಮನೆಗೆ ಬಂದಾಗ ಮೃತದೇಹಗಳು ಪತ್ತೆಯಾಗಿವೆ. ಪ್ರಕರಣವನ್ನು ಕೊಲೆ ಮತ್ತು ಆತ್ಮಹತ್ಯೆ ಎಂಬ ಶಂಕೆಯಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಈ ಪ್ರದೇಶದಲ್ಲಿ ನಡೆದ ಹೆಚ್ಚುವರಿ ಮಾಹಿತಿ ಅಥವಾ ಸಿಸಿಟಿವಿ ದೃಶ್ಯಗಳು ಹೊಂದಿದ್ದರೆ, ಅದನ್ನು ಸ್ಥಳೀಯರು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಗೆ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಲ್ವರ ಸಾವಿನ ಬಗ್ಗೆ ಸಂತಾಪ ಸೂಚಿಸಿರುವ ಸ್ಥಳೀಯ ಮೇಯರ್ ಪೀಟರ್ ಕ್ಯಾಂಟು, ”ಘಟನೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ” ಎಂದಿದ್ದಾರೆ.

ಮೃತರ ಸಂಬಂಧಿಕರು ಪ್ರತಿಕ್ರಿಯಿಸಿ, ”ತೇಜ್​ ಪ್ರತಾಪ್​ ಸಿಂಗ್ ಹಾಗೂ ಸೋನಾಲ್ ಪರಿಹಾರ್ ದಂಪತಿ ಯಾವಾಗಲೂ ಸಂತೋಷದಿಂದ ಇರುತ್ತಿದ್ದರು. ಇಬ್ಬರೂ ಮಾನವ ಸಂಪನ್ಮೂಲ ಕ್ಷೇತ್ರ ಸೇರಿದಂತೆ ಐಟಿಯಲ್ಲಿ ವೃತ್ತಿಜೀವನ ಸಾಗಿಸುತ್ತಿದ್ದರು” ಎಂದು ತಿಳಿಸಿದ್ದಾರೆ. ಸಿಂಗ್ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ನೆಸ್ ಡಿಜಿಟಲ್ ಎಂಜಿನಿಯರಿಂಗ್‌ ಕಂಪನಿಯಲ್ಲಿ ಸಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಈ ದಂಪತಿ ತಮ್ಮ ಮನೆಯನ್ನು 2018ರ ಆಗಸ್ಟ್​ 6,35,000 ಡಾಲರ್​ಗೆ ಖರೀದಿಸಿದ್ದರು ಎಂಬ ದಾಖಲೆಗಳು ಲಭ್ಯವಾಗಿವೆ. ಮತ್ತೊಂದೆಡೆ, ”ಸಿಂಗ್ ಹಾಗೂ ಪರಿಹಾರ್ ಈ ಒಂದು ದಶಕಕ್ಕೂ ಹೆಚ್ಚು ಕಾಲ ನಮ್ಮ ಕುಟುಂಬದೊಂದಿಗೆ ಸ್ನೇಹದಿಂದ ಇದ್ದರು” ಎಂದು ಹೆಸರು ಹೇಳಲು ಇಚ್ಛಿಸದ ನೆರೆಹೊರೆ ಮನೆಯ ಮಹಿಳೆಯೊಬ್ಬರು ಹೇಳಿದ್ದಾರೆ. ”ಬಸ್ ನಿಲ್ದಾಣದಲ್ಲಿ ಪ್ರತಿ ದಿನ ಬೆಳಗ್ಗೆ ನನ್ನ ಮಗಳು ಸಾಮಾನ್ಯವಾಗಿ ಆರು ವರ್ಷದ ಬಾಲಕಿಯನ್ನು ಒಟ್ಟಿಗೆ ಶಾಲೆಗೆ ಹೋಗುವಾಗ ಭೇಟಿಯಾಗುತ್ತಿದ್ದಳು. ಆದರೆ, ಬೆಳಗ್ಗೆ ಬಾಲಕಿ ಕಾಣಿಸಿಲಿಲ್ಲ. ಈ ಕುರಿತು ಸೋನಾಲ್​ ಪರಿಹಾರ್‌ಗೆ ಮೆಸೇಜ್​ ಕಳುಹಿಸಿದರೂ, ಯಾವುದೇ ಉತ್ತರ ಬರಲಿಲ್ಲ” ಎಂದು ಆ ಮಹಿಳೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ