ಚಿತ್ರದುರ್ಗ: “ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಸೇರಿದಂತೆ ಯಾವುದೇ ನಿಯಮಿತ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಕ್ಕೆ ಹಣದ ಕೊರತೆ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗಳು ಕುಂಠಿತಗೊಂಡಿವೆ ಅನ್ನೋದು ಸುಳ್ಳು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದೇ ಅವರು. ನಾವು ಈ ಹಿಂದೆ ಆಡಳಿತ ನಡೆಸಿದ್ದೆವು. ಯಾವತ್ತೂ ಇಷ್ಟು ಪ್ರಮಾಣದ ಸಾಲ ಮಾಡಿರಲಿಲ್ಲ. ಹಾಗಾಗಿ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಅವರಿಗಿಲ್ಲ” ಎಂದು ಕಿಡಿ ಕಾರಿದರು.
10 ಸದಸ್ಯರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಕರ್ನಾಟಕಕ್ಕೆ ಆಗಮಿಸಿದೆ. ಅವರೊಂದಿಗಿನ ಚರ್ಚೆಯ ಕುರಿತು ಕೇಳಿದಾಗ, “ತಂಡದ ಸದಸ್ಯರು ನಿನ್ನೆ ತಮ್ಮನ್ನು ಭೇಟಿ ಮಾಡಿದ್ದರು. ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಹಸಿರು ಬರ ಎದುರಾಗಿದೆ. ಹಸಿರು ಕಾಣುತ್ತದೆ. ಆದರೆ, ಬೆಳೆ ವಿಫಲವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 236 ತಾಲೂಕು ಪೈಕಿ 195 ತಾಲೂಕು ಬರಪೀಡಿತ ಎಂಬುದಾಗಿ ಘೋಷಣೆ ಮಾಡಲಾಗಿದೆ. ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬೆಳೆ ಹಾನಿ ಆಗಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ಶೇ 52ರಷ್ಟು ಬರದಿಂದ ಬೆಳೆ ಹಾನಿ ಸಂಭವಿಸಿದೆ. ಕೆಲವು ಜಲಾಶಯಗಳನ್ನು ಹೊರತುಪಡಿಸಿದರೆ ಈ ಬಾರಿ ನಮ್ಮ ಭಾಗಶಃ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. 4,860 ಕೋಟಿ ರೂ. ಬೆಳೆ ಪರಿಹಾರ ಕೇಳಿದ್ದೇವೆ. ಹಾಗಾಗಿ ಕೇಂದ್ರ ಅಧ್ಯಯನ ತಂಡದಿಂದ ವಸ್ತುಸ್ಥಿತಿ ಅಧ್ಯಯನಕ್ಕೆ ಸೂಚನೆ ನೀಡಲಾಗಿದೆ” ಎಂದರು.
“ಭದ್ರಾ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಪ್ರತಿಕ್ರಿಯಿಸಿ, “ಕೇಂದ್ರ ಸರ್ಕಾರ ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5,300 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ಕೂಡ ಬಂದಿಲ್ಲ. ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಈ ಬಗ್ಗೆ ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದೇನೆ. ನಮ್ಮ ಸಚಿವರು ಸಂಬಂಧಪಟ್ಟವರನ್ನು ಭೇಟಿ ಮಾಡಿದ್ದಾರೆ. ನಾನು ಕೂಡ ಭೇಟಿ ಮಾಡಿದ್ದೇನೆ. ಆದರೆ, 6 ತಿಂಗಳಾದರೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ” ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7