ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ಮೂರು ತಂಡಗಳು ರಾಜ್ಯಕ್ಕೆ ಆಗಮಿಸುತ್ತಿದ್ದು, ಅಕ್ಟೋಬರ್ 5ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧೆಡೆ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ.
ಕೇಂದ್ರ ತಂಡ ಹತ್ತು ಸದಸ್ಯರನ್ನೊಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 5ರಂದು ಮೂರು ತಂಡಗಳು ಬೆಳಗ್ಗೆ 9:30 ರಿಂದ 10:30ರ ಗಂಟೆವರೆಗೆ ಕರ್ನಾಟಕ ರಾಜ್ಯ ಪೃಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿವೆ. ಮಧ್ಯಾಹ್ನ 12:00 ಗಂಟೆಗೆ ವಿಧಾನಸೌಧ ಕೊಠಡಿಯಲ್ಲಿ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು ಜಿಲ್ಲೆಗಳಿಗೆ ತೆರಳಲಿವೆ ಎಂದು ಹೇಳಿದರು.
ಮೊದಲ ತಂಡ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆ ನಿರ್ದೇಶಕ ಡಾ.ಜೆ.ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತ ಎಸ್.ಪಾಟೀಲ್ ಇದ್ದಾರೆ.
ಎರಡನೇ ತಂಡ: ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ನೇತೃತ್ವದಲ್ಲಿ, ಪಶುಸಂಗೋಪನೆ ಇಲಾಖೆ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಇದ್ದಾರೆ.
ಮೂರನೇ ತಂಡ: ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್.ವಿ ನೇತೃತ್ವದಲ್ಲಿ ಎಂ.ಎನ್.ಸಿ.ಎಫ್.ಸಿ ಉಪ ನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸ ರೆಡ್ಡಿ ಇರಲಿದ್ದಾರೆ.
Laxmi News 24×7