Breaking News

ಮುರುಘಾ ಶ್ರೀಗಳ ವಿರುದ್ಧ ಪಿತೂರಿ ಆರೋಪ: ವಿಚಾರಣೆ ಮುಂದೂಡಿದ ಹೈಕೋರ್ಟ್

Spread the love

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪ್ರಕರಣದ ಸಾಕ್ಷಿಗಳಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಮತ್ತವರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಮುರುಘಾ ಶರಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ ಮತ್ತು ಹಣ ಸುಲಿಗೆಗೆ ಪ್ರಯತ್ನಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸವರಾಜನ್ ಮತ್ತು ಸೌಭಾಗ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರ ಪೀಠ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರ ಬಸವಪ್ರಭು ಸ್ವಾಮೀಜಿ ಅವರು ಅರ್ಜಿದಾರರ ವಿರುದ್ಧ ದಾಖಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಪೋಕ್ಸೋ ಪ್ರಕರಣದ ಆರೋಪಗಳಿಂದ ಶಿವಮೂರ್ತಿ ಶರಣರಿಗೆ ರಕ್ಷಣೆ ಒದಗಿಸಲು ಅರ್ಜಿದಾರರ ವಿರುದ್ಧ ಈ ಪ್ರತಿ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೋಕ್ಸೋ ಪ್ರಕರಣದಲ್ಲಿ ಅರ್ಜಿದಾರರು ಸಹ ಸಾಕ್ಷಿಗಳಾಗಿದ್ದಾರೆ. ಅವರ ವಿರುದ್ಧ ಪ್ರತಿ ದೂರು ದಾಖಲಿಸಿರುವಾಗ ಸಾಕ್ಷಿಗಳ ರಕ್ಷಣೆ ಹೇಗೆ ತಾನೆ ಸಾಧ್ಯ. ಪೋಕ್ಸೋ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ? ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಚಿತ್ರದುರ್ಗ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಹಂತ ತಲುಪಿದೆ. ಆ ವಿಚಾರಣೆ ಪೂರ್ಣಗೊಂಡರೆ, ಎಲ್ಲ ಸತ್ಯಾಂಶ ಹೊರಬರುತ್ತದೆ ಅಲ್ಲವೇ ಎಂದು ತಿಳಿಸಿತು. ಅಲ್ಲದೆ, ಅರ್ಜಿ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು? ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಹಲವು ಪಟ್ಟಭದ್ರ ಹಿತಾಸಕ್ತಿಗಳು ಸಂತ್ರಸ್ತ ಬಾಲಕಿಯರು ಹಾಗೂ ಅವರ ತಾಯಿಯನ್ನು ಪ್ರೇರೇಪಿಸಿದ್ದಾರೆ. ಹಣ ಪಡೆಯಬೇಕು ಎನ್ನುವ ಮತ್ತು ಮಠಕ್ಕೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಕೇಸು ದಾಖಲಿಸಿರುತ್ತಾರೆ. ಈ ವ್ಯವಸ್ಥಿತ ಪಿತೂರಿಯ ಹಿಂದೆ ಇರುವವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಮಠದ ಉಸ್ತುವಾರಿ ಸ್ವಾಮೀಜಿಯೂ ಆದ ಬಸವಪ್ರಭು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಪಿತೂರಿ ಮತ್ತು ಹಣದ ಸುಲಿಗೆಗೆ ಪ್ರಯತ್ನಿಸಿದ ಆರೋಪದಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದರು.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ