ಚಿಕ್ಕೋಡಿ (ಬೆಳಗಾವಿ) : ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಇನ್ನೂ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗದೆ ತೊಂದರೆಯಾಗುತ್ತಿದೆ.
ಹೀಗಾಗಿ ಶಾಸಕರು ಖಾಲಿ ಕುಳಿತಿದ್ದೇವೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಬುಧವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕ್ಷೇತ್ರದ ಜನರು ರಸ್ತೆ, ನೀರಾವರಿ ಯೋಜನೆ, ಸಮುದಾಯ ಭವನ, ಶಾಲೆ, ಗುಡಿ-ಗುಂಡಾರಗಳನ್ನು ಕೇಳುತ್ತಿದ್ದಾರೆ. ಶಾಸಕರ ನಿಧಿಗೆ 50 ಲಕ್ಷ ರೂ ಹಾಕಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಹಣದ ಬಗ್ಗೆ ಡಿಸಿ ಯಾವುದೇ ಆದೇಶ ಪತ್ರವನ್ನು ನಮಗೆ ನೀಡಿಲ್ಲ. ಇನ್ನೂ ಜಿಲ್ಲಾಧಿಕಾರಿಗಳಿಂದ ಆದೇಶ ಪತ್ರ ಬರದೆ ಶಾಸಕರು ಖಾಲಿ ಕುಳಿತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದೆರಡು ದಿನಗಳಿಂದ ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದೆ. ಸರ್ಕಾರದ ವಿರುದ್ದವಾಗಲಿ, ವಿರೋಧದ ವಿರುದ್ಧವಾಗಲಿ ನಾನು ಮಾತಾಡಿಲ್ಲ. ಕೆಲವು ವಿಚಾರಗಳ ಕುರಿತು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇನೆ. ಸಲಹೆ ಕೊಡುವುದೇ ತಪ್ಪಾ? ಸಲಹೆಯನ್ನು ನೀವು ಸರ್ಕಾರದ ವಿರುದ್ಧ ಹೇಳಿಕೆ ಎನ್ನುತ್ತೀರಿ ಎಂದರು.
ಕಾಗವಾಡ ಮತಕ್ಷೇತ್ರದಲ್ಲಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಬರುತ್ತಿಲ್ಲ. ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಆದರೂ ಕಾರ್ಯಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಬ್ಬ ಭಿಕ್ಷುಕನಿಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಕೊಟ್ಟರೆ ಅದುವೇ ಸಾಮಾಜಿಕ ನ್ಯಾಯ. ಭಾರತೀಯ 140 ಕೋಟಿ ಜನರು ಗೌರವದಿಂದ ಬಾಳಬೇಕು ಮತ್ತು ಎರಡು ಹೊತ್ತು ಊಟಮಾಡಿ ಸುಖದ ನಿದ್ದೆ ಮಾಡಬೇಕೆಂಬುದು ನನ್ನ ಭಾವನೆ.
ನಾವು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಲ್ಲಿ ನಾನೂ ಒಬ್ಬ. ನಮ್ಮಲ್ಲಿ ಹಲವು ನ್ಯೂನತೆಗಳಿವೆ. ಚುನಾವಣೆ ಸಮಯದಲ್ಲಿ ಹಲವು ಆಶ್ವಾಸನೆಗಳನ್ನು ನೀಡಿದ್ದೇನೆ. ಆದರೆ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿವೆ. ಈ ನಿಟ್ಟಿನಲ್ಲಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ಕಳೆದ ಇಪ್ಪತ್ತೈದು ವರ್ಷಗಳಿಂದ ಶಾಸಕನಾಗಿದ್ದೇನೆ. ಇದರಲ್ಲಿ ಎಂಟು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಮೂರು ಚುನಾವಣೆ ಸೋತಿದ್ದು, 5 ಗೆದ್ದಿದ್ದೇನೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಮಯದ ವ್ಯವಸ್ಥೆ ಮತ್ತು ಇವತ್ತಿನ ವ್ಯವಸ್ಥೆಗೆ ತುಂಬಾ ವ್ಯತ್ಯಾಸವಿದೆ. ಯಾಕೆ ಈ ರೀತಿ ಬದಲಾವಣೆ ಎಂದು ಕಾಗೆ ಪ್ರಶ್ನಿಸಿದರು.
ಬಸವೇಶ್ವರ, ಮಹಾತ್ಮ ಗಾಂಧೀಜಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಳ್ಳೆಯ ತತ್ವ ಸಿದ್ಧಾಂತಗಳನ್ನು ನೀಡಿದ್ದಾರೆ. ಸಂವಿಧಾನಡಿಯಲ್ಲಿ ಕಾರ್ಯ ಮಾಡಬೇಕು. ನಾವು ಯಾರೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಕಾರ್ಯಾಂಗ, ಶಾಸಕಾಂಗ ಕೆಲವು ವೈಫಲ್ಯಗಳ ಬಗ್ಗೆ ಮಾತನಾಡಿದ್ದೇನೆ. ಆ ಹೇಳಿಕೆಗೆ ನಾನು ಬದ್ಧ. ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ನನ್ನ ತಪ್ಪಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.