ಮೈಸೂರು, ಅ.02: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದೆ (Tiger Attack). ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿಯಿಂದ ರೈತನೋರ್ವ ಬಲಿಯಾಗಿದ್ದಾನೆ (Death). ರೈತ ಗಣೇಶ(55) ಮೃತ ದುರ್ದೈವಿ. ದನ ಮೇಯಿಸುತ್ತಿದ್ದಾಗಲೇ ರೈತ ಗಣೇಶನ ಮೇಲೆ ಹುಲಿ ದಾಳಿ ಮಾಡಿದೆ. ದಾಳಿಯಿಂದಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದು ರೈತನ ಮೃತದೇಹವನ್ನು ಅರ್ಧ ತಿಂದು ಹುಲಿ ಬಿಟ್ಟುಹೋಗಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ (GD Harish Gowda) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದಾಗ ಹುಲಿ ರೈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮೃತ ರೈತ ಗಣೇಶನಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ. ಗಣೇಶ್ ಉಡುವೆಪುರದ ಪಕ್ಕದಲ್ಲೇ ಇರುವ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಜಾನುವಾರುಗಳು ಮನೆಗೆ ವಾಪಸ್ ಆದರೂ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್‌ರ ಶವ ಪತ್ತೆಯಾಗಿದೆ.