ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಘಟನೆಜಿಲ್ಲೆಯ ಕಡೂರು ತಾಲೂಕಿನ ಕೆ ಬಿದರೆ ಗ್ರಾಮದಲ್ಲಿ ನಡೆದಿದೆ. ಕಮಲಮ್ಮ (50) ಕೊಲೆಗೀಡಾದ ತಾಯಿ, ಸಂತೋಷ್ (30) ಕೊಲೆ ಆರೋಪಿ.
ಹತ್ಯೆ ಮಾಡಿದ ಬಳಿಕ ಗ್ರಾಮದ ತೆಂಗಿನ ನಾರಿನ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಕಲ್ಲೇಶಪ್ಪ ಬಳಿಗೆ ಬಂದು ಆತನೇ ವಿಷಯ ತಿಳಿಸಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ಸಂತೋಷ್ ಹಲವು ದಿನಗಳಿಂದ ಮದ್ಯ ಸೇವಿಸಿ ತಾಯಿಯೊಂದಿಗೆ ಜಗಳವಾಡುತ್ತಿದ್ದ. ಇಂದು ಸಹ ಜಗಳವಾಡಿದ್ದ ಆತ ಕುಡಿಯಲು ಹಣ ನೀಡದ್ದಕ್ಕೆ ಹೆತ್ತಮ್ಮನನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಯ ತಂದೆ, ಮಗನ ವಿರುದ್ಧ ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಹಿಂದಿನ ಘಟನೆ: ಕೆಲವು ತಿಂಗಳ ಹಿಂದೆ ಆಸ್ತಿಗಾಗಿ ಹೆತ್ತ ತಾಯಿಯನ್ನು ಮಗ ಕೊಲೆ ಮಾಡಿದ್ದ ಘಟನೆ ದೇವನಹಳ್ಳಿ ತಾಲೂಕಿನ ಉದಯಗಿರಿ ಸಮೀಪ ನಡೆದಿತ್ತು. ಚಿನ್ನಮ್ಮ ಕೊಲೆಗೀಡಾಗಿದ್ದ ಮಹಿಳೆ. ಚಿನ್ನಮ್ಮನಿಗೆ ಇಬ್ಬರು ಗಂಡು ಮಕ್ಕಳು. ಮೊದಲನೇ ಮಗ ರಾಘವೇಂದ್ರ ಮತ್ತು ಎರಡನೇ ಮಗ ರಾಜೇಶ್. ಮೊದಲ ಮಗ ರಾಘವೇಂದ್ರನಿಗೆ ಸುಧಾ ಎಂಬುವಳೊಂದಿಗೆ ಮದುವೆ ಆಗಿತ್ತು.
ಕಳೆದ ಒಂದು ವರ್ಷದ ಹಿಂದೆ ಚಿನ್ನಮ್ಮ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಇರೋ ಜಮೀನನ್ನು ಮಾರಿ ಇಬ್ಬರು ಮಕ್ಕಳಿಗೆ ಸಮನಾಗಿ ಹಂಚುವ ನಿರ್ಧಾರ ಮಾಡಿದ್ದರು. ಅದಕ್ಕೂ ಮೊದಲೇ ಮಗ ರಾಘವೇಂದ್ರ ಮತ್ತು ಸೊಸೆ ಸುಧಾ ಸೇರಿಕೊಂಡು ಚಿನ್ನಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
Laxmi News 24×7