ಬೆಳಗಾವಿ : ಜಗತ್ತಿಗೆ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಬೋಧಿಸಿದ ಮಹಾತ್ಮ ಗಾಂಧೀಜಿಯವರ ಮಾರ್ಗವೇ ಸರಿಯಾದ ಮಾರ್ಗ.
ಭಾರತೀಯರಾದ ನಾವು ಪರಸ್ಪರ ಗೌರವಿಸುವ ಮೂಲಕ ಸದಾ ಭಾರತೀಯರಾಗುವ ಜತೆಗೆ ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯಬೇಕು ಎಂದು ಶಾಸಕ ಆಸೀಫ್ ಸೇಠ್ ಕರೆ ಕೊಟ್ಟರು.
ಇಂದಿನ ಯುವಪೀಳಿಗೆ ಗಾಂಧೀಜಿ ತತ್ವಗಳನ್ನು ಸ್ವೀಕರಿಸಬೇಕು. ಅವರ ಪುಸ್ತಕಗಳನ್ನು ಓದಿ ವಿಚಾರ, ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಾದರಿ ವ್ಯಕ್ತಿಗಳಾಗಲು ಕಠಿಣ ಶ್ರಮವಹಿಸಿ, ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಪ್ರಯತ್ನದ ಪ್ರತಿಫಲ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದು ದೇಶ ಕಂಡ ಮಹಾನ್ ನಾಯಕ, ಸರಳ ಜೀವಿ, ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಹೌದು. “ಜೈ ಜವಾನ್-ಜೈ ಕಿಸಾನ್” ಘೋಷಣೆ ಮೊಳಗಿಸಿದ ಅವರ ಸರಳ ಜೀವನ ನಿರ್ವಹಣೆಯನ್ನು ನಾವೆಲ್ಲರೂ ಪಾಠವಾಗಿ ಕಲಿಯಬೇಕು ಎಂದರು.
ಮನುಷ್ಯ ಕುಲಕ್ಕೆ ಶಾಂತಿ, ಸಹಬಾಳ್ವೆ ತೋರಿಸಿಕೊಟ್ಟವರು ಗಾಂಧೀಜಿ. ಅಹಿಂಸಾ ತತ್ವ, ವಿಚಾರ, ಸರಳತೆ ನಡೆ ಇಡೀ ಪ್ರಪಂಚ ಮೆಚ್ಚುವಂಥದ್ದು. ಗಾಂಧೀಜಿಯವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅವರ ಆಶಯದಂತೆ ರಾಮರಾಜ್ಯ ಕಟ್ಟಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ತಿಳಿಸಿದರು.
ಇದಕ್ಕೂ ಮುನ್ನ ವಿಶೇಷ ಉಪನ್ಯಾಸ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ.ಗಂಗಾಧರಯ್ಯ, ಗಾಂಧೀಜಿಯವರು ತಮ್ಮ ಅಹಿಂಸಾ ತತ್ವದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶಕ್ಕೆ ರಾಮರಾಜ್ಯದ ಕಲ್ಪನೆಯನ್ನು ಬಿತ್ತುವ ಕಾರ್ಯಕ್ಕೆ ಮುಂದಾದರು. ಅವರ ಸಾಮಾಜಿಕ, ಧಾರ್ಮಿಕ ನೀತಿಗಳು, ಗಾಂಧಿ ತತ್ವ ಅನೇಕ ದೇಶಗಳಿಗೆ ಮಾದರಿಯಾಗಿವೆ. ವಿದ್ಯಾರ್ಥಿಗಳು ಶಾಂತಿದೂತ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಏಕಾಗ್ರತೆ ಹೆಚ್ಚಿಸಲು ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕೆಂದರು.