ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಲ್ಲಿ ರಾತ್ರಿ ಕಳೆದಿದ್ದಾರೆ.
ಗುರುವಾರ ಬೆಳಗ್ಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ಬಂಧಿಸಿತ್ತು. 1 ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್‍ನಲ್ಲಿ ಇರುವ ವಿನಯ್ ಕುಲಕರ್ಣಿ, ಕೋವಿಡ್ ಹಿನ್ನೆಲೆ ಜೈಲು ಸಿಬ್ಬಂದಿ ಸೆಲ್‍ನಲ್ಲಿ ಒಬ್ಬರನ್ನು ಇರಿಸಿದ್ದಾರೆ. ಸಾಮಾನ್ಯ ಕೈದಿಯಂತೆ ಒಂದು ರಾತ್ರಿ ಕಳೆದ ಮಾಜಿ ಸಚಿವರಿಗೆ ಸೆಲ್‍ನಲ್ಲಿ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ತಾಳಲಾರದೆ ವಿನಯ್, ಸೊಳ್ಳೆ ಬತ್ತಿಯಾದ್ರೂ ಕೊಡಿ ಎಂದು ಜೈಲು ಸಿಬ್ಬಂದಿಗೆ ಮನವಿ ಮಾಡಿಕೊಂಡರು. ಊಟವೂ ಇಲ್ಲ, ರಾತ್ರಿಯಿಡೀ ನಿದ್ದೆ ಮಾಡದೆ ಯೋಚನೆಯಲ್ಲೇ ರಾತ್ರಿ ಕಳೆದಿದ್ದಾರೆ.
ಇಂದು ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ. ವಿನಯ್ ಕುಲಕರ್ಣಿ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 16635 ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಜೈಲಿನ ಪ್ರತ್ಯೇಕ ಕ್ವಾರಂಟೈನ್ ಸೆಂಟರ್‍ನಲ್ಲಿ ಇಡಲಾಗಿದೆ.