ಬೆಳಗಾವಿ: ಸೈನಿಕರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಓರ್ವ ಸೈನಿಕ ಮತ್ತೊಬ್ಬ ಸೈನಿಕನಿಗೆ ಬಂದೂಕಿನಿಂದ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗೋಕಾಕ ತಾಲ್ಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡು ಹಾರಿಸಿದ ಆರೋಪಿ. ಬಸಪ್ಪ ಮೈಲಪ್ಪ ಬಂಬರಗಾ (32) ಗಾಯಗೊಂಡಾತ. ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರೂ ಕೂಡ ರಾಜನಕಟ್ಟೆ ಗ್ರಾಮದವರೇ ಆಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿದ್ದು, ನಂಜುಡಿ ತನ್ನ ಲೈಸೆನ್ಸ್ ಹೊಂದಿರುವ ಡಬಲ್ ಬ್ಯಾರೆಲ್ ಬಂದೂಕಿನಿಂದ ಬಸಪ್ಪರ ಹೊಟ್ಟೆಗೆ ಗುಂಡು ಹೊಡೆದಿದ್ದಾರೆ.
ಗಾಯಾಳು ಬಸಪ್ಪ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.
ನಿವೃತ್ತ ಎಸ್ಪಿ ಪುತ್ರನಿಂದ ಫೈರಿಂಗ್: ಕೊಡಗು ಜಿಲ್ಲೆಯಲ್ಲಿ ಕೆಲದಿನಗಳ ಹಿಂದೆ ನಡೆದ ಘಟನೆಯಲ್ಲಿ ನಿವೃತ್ತ ಎಸ್ಪಿ ಪುತ್ರ ವರ್ತಕನ ಮೇಲೆ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ವರ್ತಕ ಪ್ರಾಣಪಾಯದಿಂದ ಪಾರಾಗಿದ್ದರು. ನೆಲ್ಲಮಕ್ಜಡ ರಂಜನ್ ಚಿನ್ನಪ್ಪ ಎಂಬಾತ ಸಿದ್ದಾಪುರ ರಸ್ತೆಯ ವರ್ತಕ ಕೆ. ಬೋಪಣ್ಣನ ಮೇಲೆ ರಿವಾಲ್ವಾರ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದನು.
ಕಾರ್ ಹೆಡ್ಲೈಟ್ ವಿಚಾರಕ್ಕೆ ಜಗಳ: ಕಾರಿನ ಹೆಡ್ಲೈಟ್ ವಿಚಾವಾಗಿ ಶುರವಾದ ಗಲಾಟೆ ಓರ್ವ ವ್ಯಕ್ತಿ ಪ್ರಾಣವನ್ನೇ ಬಲಿ ಪಡೆದಿರುವ ಕಳೆದ ಗುರುವಾರ ಮಹಾರಾಷ್ಟ್ರದ ನಾಗ್ಪುರದ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ನಿಖಿಲ್ ಗುಪ್ತಾ ಎನ್ನುವವರು ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗಿದ್ದರು. ಈ ವೇಳೆ ಗುಪ್ತಾ ವಾಹನದ ಹೆಡ್ಲೈಟ್ ಬಂದ್ಗೊಳಿಸಿದೆ ವಾಹನವನ್ನು ಹಾಗೆ ಪಾರ್ಕಿಂಗ್ ಮಾಡಿದ್ದರು. ಕಾರಿನ ಹೆಡ್ಲೈಟ್ ನೇರವಾಗಿ ಮುರಳೀಧರ ರಾಮರಾವ್ ನೆವಾರೆ ಎಂಬವರ ಕಣ್ಣಿಗೆ ಬಿಳುತ್ತಿದ್ದ ಕಾರಣ ಹೆಡ್ಲೈಟ್ ಬಂದ್ ಮಾಡುವಂತೆ ನೆರವಾರೆ, ನಿಖಿಲ್ ಗುಪ್ತಾಗೆ ಹೇಳಿದ್ದರು.