ಚೆನ್ನೈ(ತಮಿಳುನಾಡು): ಪತಿಯೊಬ್ಬತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದ ಮೇರೆಗೆ ವ್ಯಕ್ತಿಯೋರ್ವನ ಶಿರಚ್ಛೇದ ಮಾಡಿರುವ ಆಘಾತಕಾರಿ ಘಟನೆ ಗುರುವಾರ ಸಂಜೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ.
ಶಿರಚ್ಛೇದ ಮಾಡಿದ್ದಲ್ಲದೇ ಕತ್ತರಿಸಿದ ತಲೆಯನ್ನು ಟುಟಿಕೋರಿನ್ ಜಿಲ್ಲೆಯಲ್ಲಿರುವ ಪತ್ನಿಯ ತವರು ಮನೆ ಮುಂದೆ ಇಟ್ಟಿದ್ದ. ಕೃತ್ಯ ಎಸಗಿದ ಎಸ್.ವೇಲುಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಮುರುಗನ್ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ: ಆಲಂಕುಳಂ ಸಮೀಪದ ರೆಡಿಯಾರಪಟ್ಟಿ ಗಿಮ್ಕುಳಂ ಗ್ರಾಮಕ್ಕೆ ಸೇರಿದ ಆರೋಪಿ ವೇಲುಸಾಮಿಯು ತೂತುಕುಡಿ ಜಿಲ್ಲೆಯ ರಾಜಪುತುಕುಡಿಯ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ. ಈತನ ಪತ್ನಿಗೆ ಅದೇ ಗ್ರಾಮದ ಮುರುಗನ್ ಪರಿಚಯವಾಗಿದೆ. ಈ ಪರಿಚಯ ಸಂಬಂಧವಾಗಿ ಮಾರ್ಪಟ್ಟಿತ್ತಂತೆ. ಈ ವಿಚಾರ ತಿಳಿದ ವೇಲುಸಾಮಿ ತನ್ನ ಪತ್ನಿಯನ್ನು ಕರೆದುಕೊಂಡು ಗ್ರಾಮವನ್ನು ತೊರೆದು ಕಯತಾರ್ ಭಾರತಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದನು.
ಆದರೂ ಪತ್ನಿಯ ನಡುವಳಿಕೆಯ ಮೇಲೆ ವೇಲುಸಾಮಿಗೆ ಅನುಮಾನವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಕಳೆದ ಕೆಲವು ತಿಂಗಳ ಹಿಂದೆ ಪತಿಯಿಂದ ಬೇರ್ಪಟ್ಟು ಗಾಯತಾರು ಸಮೀಪದ ರಜಪುತುಕುಡಿ ಗ್ರಾಮದ ತನ್ನ ತಾಯಿಯ ಮನೆಗೆ ತೆರಳಿದ್ದಳು.