ನವದೆಹಲಿ: ನೀರಿನ ತೀವ್ರ ಕೊರತೆ ಇದ್ದರೂ, ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶಿಸಿದ್ದು, ಅದನ್ನು ಮರುಪರಿಶೀಲನೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದೆ.
ಜೊತೆಗೆ ಇದೊಂದು ವಿಕೃತ ಮತ್ತು ಕಾನೂನುಬಾಹಿರ ಆದೇಶವಾಗಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದೆ.
ಮುಂಗಾರು ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ರಾಜ್ಯದೆಲ್ಲೆಡೆ ವರುಣನ ಅವಕೃಪೆ ಬಿದ್ದಿದೆ. ನೈಋತ್ಯ ಮಾನ್ಸೂನ್ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 01, 2023 ರಿಂದ ಸೆಪ್ಟೆಂಬರ್ 18, 2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು 110.875 ಟಿಎಂಸಿ ಬಂದಿದ್ದರೆ, ಕಳೆದ 30 ವರ್ಷಗಳಲ್ಲಿ ಸರಾಸರಿ 238.055 ಟಿಎಂಸಿ ಇದೆ. ಈ ಬಾರಿ ಒಳಹರಿವು ಗಣನೀಯವಾಗಿ ಕುಸಿದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇಕಡಾ 53.42 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಸರ್ಕಾರ ಹೇಳಿದೆ.
5 ಸಾವಿರ ಕ್ಯೂಸೆಕ್ ಹರಿಸಲು ಆದೇಶ: ಈಚೆಗೆ CWMA ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ಬಾಕಿ ಇರುವ 6500 ಕ್ಯೂಸೆಕ್ ಸೇರಿದಂತೆ ಒಟ್ಟು 12,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು. ನಿತ್ಯ ಬಿಟ್ಟ 5 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಅಣೆಕಟ್ಟೆ ಸೇರಿದ್ದನ್ನು ಖಚಿತಪಡಿಸಬೇಕು ಎಂದು ಹೇಳಿದೆ. ಇದು ಪಾಲಿಸಲು ಅಸಾಧ್ಯವಾದ ಆದೇಶವಾಗಿದೆ. ಜಾರಿ ಮಾಡಿದಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಹೀಗಾಗಿ ಆದೇಶವನ್ನು ಪುನರ್ಪರಿಶೀಲಿಸಲು ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.
ನ್ಯಾಯಯು ಆದೇಶ ಮಾಡುವಲ್ಲಿ ವಿಫಲವಾದ ಸಿಡಬ್ಲ್ಯೂಎಂಎಗೆ ಕೆಲ ಪ್ರಶ್ನೆಗಳನ್ನು ಕೇಳಿರುವ ಸರ್ಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿನ ಸ್ಥೀತಿಯನ್ನು ಆಲಿಸಿ ನಾಲ್ಕು ಜಲಾಶಯಗಳ ಒಳಹರಿವಿನ ಆಧಾರದ ಮೇಲೆ ನೀರು ಹಂಚಿಕೆಯನ್ನು ನಿರ್ಣಯಿಸಬೇಕು. ಕಾರಣ ಈ ನಾಲ್ಕೂ ಜಲಾಶಯಗಳು ಒಂದೇ ಜಲಾನಯನ ಪ್ರದೇಶವನ್ನು ಮಾತ್ರ ಹೊಂದಿವೆ. 12,761 ಚ.ಕಿ.ಮೀ. ಜಲಾನಯನವು ರಾಜ್ಯದಲ್ಲಿದ್ದರೆ, ತಮಿಳುನಾಡಿಗೆ ಸೇರಉವ ಬಿಳಿಗುಂಡ್ಲು ಜಲಾನಯನವು 36,682 ಚ.ಕಿ.ಮೀ. ವ್ಯಾಪ್ತಿ ಆವರಿಸಿದೆ. ಜೊತೆಗೆ ಅದೇ ರಾಜ್ಯದಲ್ಲಿ ಕೆಳಹಂತದ ಜಲಾನಯನ ಪ್ರದೇಶವು 81,155 ಚ.ಕಿ.ಮೀ.ಗಳನ್ನು ಒಳಗೊಂಡಿದೆ. ಇದನ್ಯಾಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದೆ.
ಬರಗಾಲದ ಸಮಯದಲ್ಲಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು, ಬೆಳೆಗಳು ಸೇರಿದಂತೆ ಅದರ ಕನಿಷ್ಠ ಅಗತ್ಯವನ್ನು ಪೂರೈಸಲು ಬೇಕಾದ ನೀರನ್ನು ಪರಿಗಣಿಸದೇ ಇನ್ನೊಂದು ರಾಜ್ಯಕ್ಕೆ ನೀರು ಬಿಡಲು ಆದೇಶಿಸಬಹುದೇ, ತಮಿಳುನಾಡು ನೀರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ದಂಡ ವಿಧಿಸಬೇಕೇ? ಎಂದು ಸರ್ಕಾರ ಕೇಳಿದೆ.
ಸರ್ಕಾರದ ಅರ್ಜಿಯ ಜೊತೆಗೆ ಬೆಂಗಳೂರು ನಗರಕ್ಕೆ ಬೇಕಾದಷ್ಟು ಕಾವೇರಿ ನೀರನ್ನು ಒದಗಿಸಲು ಕೋರಿ ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಮತ್ತು ಬೆಂಗಳೂರಿನ ಇತರ ನಿವಾಸಿಗಳು ಮಧ್ಯಸ್ಥಿಕೆ ಅರ್ಜಿಗಳನ್ನೂ ಸಲ್ಲಿಸಿದ್ದಾರೆ.