ನವದೆಹಲಿ/ಬೆಂಗಳೂರು: ಕಾವೇರಿ ನದಿ ಹಂಚಿಕೆ ವಿವಾದವಾಗಿ ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಕೂಡ ಇದ್ದರು.
ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ದೆಹಲಿಯ ತಾಜ್ ಹೋಟೆಲ್ನಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿದ್ದು, ಗುರುವಾರ ಬೆಳಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರವನ್ನು ಸಿಎಂ ಹಾಗೂ ಸಚಿವರು ಭೇಟಿ ಮಾಡಿದ್ದಾರೆ.
ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ: ನನ್ನ ಸುದ್ದಿಗೆ ಬಂದವರದ್ದು ಒಂದೊಂದೇ ಸೆಟಲ್‌ಮೆಂಟ್ ಆಗಿದೆ. ಮಾಜಿ ಸಚಿವ, ಬಿಜೆಪಿ ಮುಖಂಡ ಈಶ್ವರಪ್ಪ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಇಂದು ಮಾತನಾಡಿದ್ದ ಈಶ್ವರಪ್ಪ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಇಂಡಿಯಾ ಮೈತ್ರಿಕೂಟಕ್ಕೆ ಕಾವೇರಿ ನೀರನ್ನು ಒತ್ತೆ ಇಟ್ಟಿದ್ದಾರೆ, ಅವರು ʼನೀರಿನ ಕಳ್ಳʼ ಎಂದು ದೂರಿದ್ದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಡಿಕೆ ಶಿವಕುಮಾರ್, ಈಗ ಈಶ್ವರಪ್ಪನವರು ಎಲ್ಲಿದ್ದಾರೆ?, ನಾನೆಲ್ಲಿ ಇದ್ದೀನಿ?, ವಿಧಾನಸಭೆಯಲ್ಲಿ ನನ್ನ ಅಪ್ಪನ ಬಗ್ಗೆ ಮಾತಾಡಿದ್ದರು. ಈಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ, ತೆಗೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಎನ್ಎಸ್ಯುಐ ತಂಡ ಭೇಟಿಎನ್ಎಸ್ಯುಐ ತಂಡ ಭೇಟಿ: ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ (ಎನ್ಎಸ್ಯುಐ) ಕೀರ್ತಿ ನೇತೃತ್ವದ ಪದಾಧಿಕಾರಿಗಳ ತಂಡ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಅವಕಾಶ ಒದಗಿಸಿಕೊಡುವಂತೆ ವಿನಂತಿ ಮಾಡಿದೆ.
ಸೆ.22ರಂದು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎನ್ಎಸ್ಯುಐ ಅಭ್ಯರ್ಥಿಗಳ ಪರವಾಗಿ ರಾಜ್ಯದಿಂದ ಬಂದಿರುವ 50 ಮಂದಿ ಎನ್ಎಸ್ಯುಐ ಕಾರ್ಯಕರ್ತರು ಕಳೆದ 15 ದಿನಗಳಿಂದ ಪ್ರಚಾರ ನಡೆಸುತ್ತಿರುವುದಾಗಿ ಮುಖ್ಯಮಂತ್ರಿಗಳಿಗೆ ರಾಜ್ಯಾದ್ಯಕ್ಷ ಕೀರ್ತಿ ಮಾಹಿತಿ ನೀಡಿದರು. ಈ ವೇಳೆ, ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಯಶಸ್ಸು ಸಿಗಲಿ ಎಂದು ಮುಖ್ಯಮಂತ್ರಿಗಳು ಕಾರ್ಯಕರ್ತರಿಗೆ ಹಾರೈಸಿದರು.