ರಾಮನಗರ: ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡದಿದ್ದರೆ ತಪ್ಪಾಗುತ್ತದೆ ಎಂದು ಜಲಸಂಪನ್ಮೂಲ ಮಂತ್ರಿಗಳು ರಾತ್ರಿಯಿಂದ ನೀರು ಬಿಟ್ಟಿದ್ದಾರೆ. ನಿನ್ನೆಯೇ ಸಚಿವರು ತರಾತುರಿಯಲ್ಲಿ ಈ ನಿರ್ಧಾರ ಮಾಡಿ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದರು.
ರಾಮನಗರ ಜಿಲ್ಲೆ ಬಿಡದಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಆ ಸಮಯದಲ್ಲಿ ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡು ಒತ್ತಡ ಹಾಕಿದೆ. ಸುಮಾರು 15 ದಿನಗಳ ಕಾಲ ನೀರು ಬಿಡುಗಡೆ ಮಾಡುವಂತೆ ಆದೇಶ ಬಂದಿದೆ ಎಂದರು.
ಕೋರ್ಟ್ ಆದೇಶದಂತೆ ಬಿಡದಿದ್ದರೆ ತಪ್ಪಾಗುತ್ತೆ ಅಂತ ಜಲಸಂಪನ್ಮೂಲ ಮಂತ್ರಿಗಳಾದ ಡಿ ಕೆ ಶಿವಕುಮಾರ್ ರಾತ್ರಿಯಿಂದ ನೀರು ಬಿಟ್ಟಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ವಾ ಅಂತ ಕೇಳಿದ್ದಾರೆ. ಹೌದು, ಹಿಂದಿನ ಸರ್ಕಾರದಲ್ಲೂ ನೀರು ಬಿಟ್ಟಿದ್ದಾರೆ. ಆದರೆ ಈ ವರ್ಷ ನಮ್ಮ ರೈತರಿಗೆ ನೀರು ಕೊಡುವುದಕ್ಕೆ ಆಗುತ್ತಿಲ್ಲ. ಇವತ್ತು ರೈತರು ಬೆಳೆದ ಬೆಳೆಗಳನ್ನ ಟ್ರಾಕ್ಟರ್ಗಳಲ್ಲಿ ಉಳುಮೆ ಮಾಡುತ್ತಿದ್ದಾರೆ. ಅನೇಕ ಸಂಘಟನೆಗಳು ಈಗಾಗಲೇ ಪ್ರತಿಭಟನೆ ಮಾಡಿವೆ ಎಂದು ಹೇಳಿದರು.
ತಮಿಳುನಾಡಿನಿಂದ ಹತ್ತು-ಹದಿನೈದು ಜನ ಅಧಿಕಾರಿಗಳು ನೀರಾವರಿ ಹಂಚಿಕೆಯ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಾರೆ. 11ಕ್ಕೆ ಸಭೆ ಆಗಿದೆ, ಅದಾದ ನಂತರ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದರು. ನಾನು ಆಗಲೇ ನಮ್ಮವರು ಸಹ ಹೋಗಿ ಅರ್ಜಿ ಹಾಕಿ ಎಂದು ಹೇಳಿದ್ದೆ. ಈಗಾಗಲೇ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿರುವುದರಿಂದ ಯಾಕೆ ಭಯ. ಕೋರ್ಟ್ ಆದೇಶ ಏನ್ ಬರುತ್ತೋ ನೋಡೋಣ. ಸುಪ್ರೀಂಕೋರ್ಟ್ ನಿಂದ ಈಗಾಗಲೇ 2007ರಲ್ಲಿ ಅಂತಿಮ ತೀರ್ಪು ಬಂದಿದ್ದು, ದೇವೇಗೌಡರ ಮಾರ್ಗದರ್ಶನದಲ್ಲಿ ಮರು ಅರ್ಜಿ ಹಾಕಿದ್ದೆವು. ಆದಾದ ಬಳಿಕ 2018ರಲ್ಲಿ ರಾಜ್ಯದ ಪರವಾಗಿ ಆದೇಶ ಬಂತು. 18 ಟಿಎಂಸಿ ನೀರು ಹಂಚಿಕೆಗೆ ಆದೇಶ ಬಂದಿತು ಎಂದು ತಿಳಿಸಿದರು.