ಶಿರಸಿ (ಉತ್ತರ ಕನ್ನಡ): ಶಾಸಕ ಶಿವರಾಮ್ ಹೆಬ್ಬಾರ್ ನಮ್ಮವರು, ನಮ್ಮ ಜೊತೆ ಇದ್ದವರು. ಕಾಂಗ್ರೆಸ್ಗೆ ಬರಲು ಬಾಗಿಲು ತೆರೆದಿಟ್ಟಿದ್ದೇವೆ. ಯಾವಾಗ ಬೇಕಾದರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಶಿರಸಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮ್ ಹೆಬ್ಬಾರ್ ನಮ್ಮ ಜೊತೆಯಲ್ಲೇ ಇದ್ದಾರೆ. ನಾವೆಲ್ಲಾ ಫ್ರೆಂಡ್ಸ್, ಅವರು ಕಾಂಗ್ರೆಸ್ಗೆ ಬರುವುದು ಮಾತ್ರ ಬಾಕಿ ಇದೆ. ಯಾವಾಗ ಬೇಕಾದರೂ ಬರುವುದಕ್ಕೆ ಅವರಿಗೆ ಸ್ವಾಗತವಿದೆ ಎಂದು ತಿಳಿಸಿದರು.
ಕೈ ಬಿಟ್ಟ ಬರಪೀಡಿತ ತಾಲೂಕು 2ನೆಯ ಪಟ್ಟಿಯಲ್ಲಿ ಸೇರ್ಪಡೆ: ಬರಗಾಲ ನಿರ್ವಹಣೆಗೆ ಆಯಾ ತಾಲೂಕಿಗೆ ಹಣ ಬಿಡುಗಡೆಯಾಗಿದ್ದು, ರೈತರಿಗೆ, ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಸನ್ನದ್ಧವಾಗಿದೆ. ಭಯಪಡುವ ಅವಶ್ಯಕತೆಯಿಲ್ಲ. ಉತ್ತಮ ಮಳೆಯಾಗಿ ರೈತರು ಸಮೃದ್ಧ ಜೀವನ ಸಾಗಿಲು ಮಠ-ಮಂದಿರಕ್ಕೆ ಭೇಟಿ ನೀಡಿ ಪೂಜೆ ನೀಡುತ್ತಿದ್ದೇನೆ.
ಜಿಲ್ಲೆಯಲ್ಲಿ ಬರಗಾಲ ಪೀಡಿತ ಎಂದು ಕೈಬಿಟ್ಟ ತಾಲೂಕನ್ನು 2ನೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಬರಗಾಲ ಪ್ರದೇಶ ಎಂದೇ ಘೋಷಣೆಯಾಗಬೇಕಿಲ್ಲ. ಅಲ್ಲಿನ ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಆದರೆ ಪರಿಹಾರ ನೀಡಲು ಮುಖ್ಯಮಂತ್ರಿ ಬಳಿ ವಿನಂತಿಸಲಾಗಿದೆ. ಎಲ್ಲ ತಾಲೂಕಿನಲ್ಲಿ ಬರಗಾಲ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮಕ್ಕೆ ಹಣ ಇಟ್ಟಿದ್ದೇವೆ. ಬಡವರ ಸೇವೆಯು ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು.