ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿರುವ ಮಾದರಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳದ ಕಾರಾಟಗಿಯ ತಿಮ್ಮಪ್ಪ ರೆಡ್ಡಿ ಎಂಬುವವರು ವಂಚನೆಗೊಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಶಾಲ್ ನಾಗ್, ಗೌರವ್ ಹಾಗೂ ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಇರುವುದೇನು?: ಕನಕಗಿರಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಸ್ಫರ್ಧಿಸಲು ತಿಮ್ಮಪ್ಪ ರೆಡ್ಡಿ ಪತ್ನಿ ಗಾಯತ್ರಿ ತಿಮ್ಮರೆಡ್ಡಿ ಆಕ್ಷಾಂಕಿಯಾಗಿದ್ದರು. ಟಿಕೆಟ್ ಪಡೆಯಲು ಭಾರಿ ಪೈಪೋಟಿ ಎದುರಾಗಿತ್ತು. ಈ ವೇಳೆ, ದೆಹಲಿ ಮೂಲದ ವಿಶಾಲ್ ನಾಗ್ ಪರಿಚಯವಾಗಿದೆ. ಬಿಜೆಪಿಯಿಂದ ಸೆಂಟ್ರಲ್ ಸರ್ವೆ ಚೀಫ್ ಎಂದು ಪರಿಚಯಿಸಿಕೊಂಡಿದ್ದ. ಸಹ ಆರೋಪಿ ಜೀತುಗೂ ಬಿಜೆಪಿ ನಾಯಕರೊಂದಿಗೆ ಒಳ್ಳೆಯ ಸಂಪರ್ಕವಿದೆ ಎಂದು ಸುಳ್ಳು ಹೇಳಿದ್ದ. ಕೆಲ ದಿನಗಳ ಬಳಿಕ ಕರ್ನಾಟಕದಲ್ಲಿ ಬಿಜೆಪಿಯಿಂದ ಸರ್ವೆ ನಡೆಸುತ್ತಿದ್ದು, ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಎರಡನೇ ಸ್ಥಾನದಲ್ಲಿದೆ. ಮೊದಲ ಹೆಸರು ಮಾಡಿ ಅಮಿತ್ ಶಾ ಹಾಗೂ ಅರುಣ್ ಸಿಂಗ್ ಅವರಿಗೆ ಫೈನಲ್ ವರದಿ ನೀಡುತ್ತೇನೆ.
ಆದರೆ, ಇದಕ್ಕೆ ಹಣ ಖರ್ಚಾಗಲಿದ್ದು 25 ಲಕ್ಷ ಹಣ ನೀಡಿದರೆ ಟಿಕೆಟ್ ಫೈನಲ್ ಮಾಡಿಕೊಡುವೆ ಎಂದು ಆಶ್ವಾಸನೆ ನೀಡಿದ್ದಾನೆ. ಆಡಿದ ಮಾತಿನಂತೆ ತಿಮ್ಮಪ್ಪ ರೆಡ್ಡಿ 21 ಲಕ್ಷ ಹಣ ಪಾವತಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಘೋಷಣೆ ಪಟ್ಟಿಯಲ್ಲಿ ಗಾಯತ್ರಿ ತಿಮ್ಮಪ್ಪ ಹೆಸರು ಮಿಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ನೀಡಿದ ಹಣ ನೀಡುವಂತೆ ಕೇಳಿದಾಗ ಹಣ ವಾಪಸ್ ನೀಡುವುದಾಗಿ ಮೂರು ತಿಂಗಳಿಂದ ಸತಾಯಿಸಿದ್ದಾರೆ. ಈ ಬಗ್ಗೆ ಅಶೋಕನಗರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.