ಬೆಳಗಾವಿ: ಅಂಧರಿಗೆ ಅನುಕೂಲ ಆಗಲಿ ಎಂದು ಗೂಗಲ್ ಒಂದು ತಂತ್ರಾಂಶವನ್ನು ಕಂಡು ಹಿಡಿದಿತ್ತು. ಆದರೆ, ಅದು ಕನ್ನಡದಲ್ಲಿ ಇರಲಿಲ್ಲ. ಇದರಿಂದ ಕನ್ನಡವಷ್ಟೇ ಬಲ್ಲ ಅಂಧರು ಈ ತಂತ್ರಾಂಶವನ್ನು ಬಳಸಲು ಪರದಾಡಬೇಕಿತ್ತು. ಮನಗಂಡ ಬೈಲಹೊಂಗಲದ ಅಂಧ ಸರ್ಕಾರಿ ನೌಕರನೊಬ್ಬ ನಿರಂತರವಾಗಿ ಎರಡು ವರ್ಷ ಶ್ರಮವಹಿಸಿ ಕೊನೆಗೂ ಆ ಆಯಪ್ನಲ್ಲಿ ಕನ್ನಡ ಭಾಷೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಪ್ಪು ಕನ್ನಡಕ ಹಾಕಿಕೊಂಡಿರುವ ಬೈಲಹೊಂಗಲ ಪಟ್ಟಣದ ಸಿದ್ದಲಿಂಗೇಶ್ವರ ಮಹಾಂತೇಶ ಇಂಗಳಗಿ ಅವರೇ ಅಂಧರ ಪರವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ನಿವೃತ್ತ ಉಪನ್ಯಾಸಕ, ತಾಯಿ ಪ್ರೌಢಶಾಲಾ ಶಿಕ್ಷಕಿ. ಈ ಸಿದ್ದಲಿಂಗೇಶ್ವರ ದೃಷ್ಟಿದೋಷ ಹೊಂದಿದ್ದರೂ, ಅವರು ಯಾವುದರಲ್ಲೂ ಕಮ್ಮಿ ಇಲ್ಲ.
ಲುಕ್‌ಔಟ್ ಅಸಿಸ್ಟೆಡ್ ವಿಷನ್: ಅಂಧರಿಗೆ ತಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ತಿಳಿದುಕೊಳ್ಳಲು ಅನುಕೂಲ ಆಗಲಿ ಎಂದು ಗೂಗಲ್ “ಲುಕ್‌ಔಟ್ ಅಸಿಸ್ಟೆಡ್ ವಿಷನ್” ಎಂಬ ತಂತ್ರಾಂಶವನ್ನು ಕಂಡು ಹಿಡಿದಿದೆ. ಆದರೆ, ಇದು ಕನ್ನಡದಲ್ಲಿ ಇರಲಿಲ್ಲ. ಗೂಗಲ್ ಸಂಸ್ಥೆಯ ಡಿಸೆಬಿಲಿಟಿ ಹೆಲ್ಪ್ಡೆಸ್ಕ್ಗೆ 2021ರಲ್ಲಿ ಇ-ಮೇಲ್ ಹಾಗೂ ಟ್ವಿಟರ್ ಮೂಲಕ ಸಿದ್ದಲಿಂಗೇಶ್ವರ ಅಭಿಯಾನ ನಡೆಸಿದ್ದರು. ಸತತ ಎರಡು ವರ್ಷಗಳ ಅವರ ಪ್ರಯತ್ನದ ಫಲವಾಗಿ ಇದೇ ವರ್ಷ ಆಗಸ್ಟ್ 17ರಂದು ಈ ತಂತ್ರಾಂಶಕ್ಕೆ ಕನ್ನಡ ಸೇರ್ಪಡೆ ಆಗಿದ್ದು, ರಾಜ್ಯದ ದೃಷ್ಟಿದೋಷ ಉಳ್ಳವರ ಪಾಲಿಗೆ ಬೆಳಕಾಗಿ ಪರಿಣಮಿಸಿದೆ.