ಹುಬ್ಬಳ್ಳಿ : ಬರಗಾಲದ ವಿಚಾರದಲ್ಲಿ ನಮಗೆ ಯಾವ ಗೊಂದಲವೂ ಇಲ್ಲ.
ರೈತರನ್ನು ಗೊಂದಲಕ್ಕೀಡು ಮಾಡಿದ್ದು ಕೇಂದ್ರ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. 195 ತಾಲೂಕುಗಳನ್ನು ಬರಪೀಡಿತವೆಂದುು ಘೋಷಿಸಿದ್ದೇವೆ. ಈ ಸಂಬಂಧ ಒಂದೂವರೆ ತಿಂಗಳಿಂದ ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮಾನದಂಡಗಳಿಗೆ ಕೆಲ ತಾಲೂಕುಗಳು ಬರುತ್ತಿಲ್ಲ ಎಂದು ತಿಳಿಸಿದರು.
ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆಯೂ ಇಲ್ಲ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ನಾವು ಮಾಡಿದ್ದೇವೆ. ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿದರು. ಜುಲೈ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದು ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಕೇಂದ್ರ ತನ್ನ ಪ್ರತಿಷ್ಠೆಯನ್ನು ಬಿಡಬೇಕು ಎಂದ ಸಚಿವ ಬೈರೇಗೌಡ ಆಗ್ರಹಿಸಿದರು.
ಮುಖ್ಯಮಂತ್ರಿಗಳ ಪತ್ರಕ್ಕೆ ಇನ್ನೂ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಗಳು ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡೋಕೆ ಅವಕಾಶ ಕೊಡಬೇಕು. ಈ ತಿಂಗಳ ಕೊನೆಯಲ್ಲಿ ಬರಗಾಲದ ಮಾನದಂಡ ಪರಿಶೀಲನೆ ಮಾಡುತ್ತೇವೆ ಎಂದರು.