ಬೆಳಗಾವಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಮೂಲದ 8 ಜನ ಯುವಕರು ಚೇತರಿಸಿಕೊಂಡಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ತಿಳಿಸಿದ್ದಾರೆ. ಈ ಘಟನೆ ಹಿಂದೆ ಚಾಕೊಲೇಟ್ ಗ್ಯಾಂಗ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಹೌದು ಸೆ. 11ರಂದು ರಾತ್ರಿ ಗೋವಾದಿಂದ ಉತ್ತರಪ್ರದೇಶಕ್ಕೆ ಹೋಗುತ್ತಿದ್ದ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ವಿಷಾಹಾರ ಸೇವಿಸಿ 8 ಯುವಕರು ಬೆಳಗಾವಿ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಅಸ್ವಸ್ತಗೊಂಡಿದ್ದರು. ತಕ್ಷಣವೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ, ವಾಸ್ಕೋ ನಿಜಾಮುದ್ದಿನ ರೈಲಿನಲ್ಲಿ ಗೋವಾದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 8 ಜನ ಯುವಕರು ವಿಷಾಹಾರ ಸೇವಿಸಿ ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಒಬ್ಬ ಯುವಕ ಮಾತ್ರ ಇನ್ನೂ ಹುಷಾರಾಗಿಲ್ಲ ಎಂದರು.
ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಯುವಕರು ಮದ್ಯಪಾನ ಮಾಡಿರಲಿಲ್ಲ. ಚಾಕೊಲೇಟ್ ತಿಂದು ವಿಷಾಹಾರವಾಗಿ ಅಸ್ವಸ್ಥರಾಗಿದ್ದರು. ವಿಷಾಹಾರ ಸೇವನೆಯಾದಾಗ ಸಾಮಾನ್ಯವಾಗಿ ವಾಂತಿ ಬೇಧಿ ಬರುವುದು ಸಹಜ. ಸುಮ್ಮನೆ ಅಸ್ವಸ್ಥರಾಗುವುದಿಲ್ಲ. ಇದೊಂದು ವಿಶೇಷ ಪ್ರಕರಣವಾಗಿದೆ. ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಸಂಪೂರ್ಣ ವರದಿ ಬಂದ ಬಳಿಕ ಸತ್ಯ ಸಂಗತಿ ತಿಳಿಯಲಿದೆ ಎಂದು ಹೇಳಿದರು.
ಮತ್ತೆ ಆಕ್ಟಿವ್ ಆಯ್ತಾ ಚಾಕಲೇಟ್ ಗ್ಯಾಂಗ್..?: ಗೋವಾ-ಕರ್ನಾಟಕ ಮಧ್ಯೆ ಪ್ರಯಾಣಿಕರ ದರೋಡೆ ಮಾಡುವ ಚಾಕೊಲೇಟ್ ಗ್ಯಾಂಗ್ ಮತ್ತೆ ಆಕ್ಟಿವ್ ಆಗಿದೆಯಾ? ಎಂಬ ಸಂಶಯ ಮೂಡಿದೆ. ಮತ್ತು ಬರುವ ಚಾಕೊಲೇಟ್ ನೀಡಿ ಚಿನ್ನಾಭರಣ, ಹಣ, ಮೊಬೈಲ್ ದೋಚುವ ಗ್ಯಾಂಗ್ ಇದಾಗಿದ್ದು, ಈ ಗ್ಯಾಂಗ್ನ ಖೆಡ್ಡಾಗೆ 8 ಪ್ರಯಾಣಿಕರು ಬಿದ್ದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.