ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷಿ ದೇವಿಗೆ ಶ್ರಾವಣ ಮಾಸದ ಕೊನೆಯ ಮಂಗಳವಾರ ಬಳೆಯ ಅಲಂಕಾರ ಮಾಡಲಾಗಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ದೇವಿಗೆ ಉಡಿ ತುಂಬಿದರು.
ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ದೇವಸ್ಥಾನಕ್ಕೆ ಆಗಮಿಸಿತ್ತು. ಬೆಳಗ್ಗೆ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವಿಗೆ ಉಡಿ ತುಂಬಿದರು. ಶ್ರಾವಣ ಮಾಸದ ಕೊನೆಯ ಮಂಗಳವಾರ ಪ್ರತಿ ವರ್ಷ ಗ್ರಾಮಸ್ಥರು ಉಡಿ ತುಂಬುವ ಸಂಪ್ರದಾಯವಿದ್ದು, ಅದರಂತೆ ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಪುನೀತರಾದರು.
ದೇವಿಗೆ ವಿಶೇಷವಾಗಿ ಬಳೆಯ ಅಲಂಕಾರ ಮಾಡಲಾಗಿತ್ತು. ಜತೆಗೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣ ಹಾಗೂ ಹೂವಿನಿಂದ ಸಿಂಗಾರ ಮಾಡಲಾಗಿತ್ತು. ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಗಂಟೆಗಟ್ಟಲೇ ಕಾಯ್ದು ದೇವಿಯ ದರ್ಶನ ಪಡೆದರು.