ಸೆಪ್ಟೆಂಬರ್ 28ರಂದು ಬಹುನಿರೀಕ್ಷಿತ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.
ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಿನಿಮಾಗಳು ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್, ಪಠಾಣ್, ಜೈಲರ್ ಹೀಗೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿವೆ.
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿವೆ. ವಿಶ್ವಾದ್ಯಂತ ಭಾರತದ ಸಿನಿಮಾಗಳು ತಿಂಗಳುಗಟ್ಟಲೆ ಪ್ರದರ್ಶನ ಕಾಣುತ್ತಿವೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಇದೀಗ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಈ ನಡುವೆ ಇದೇ ತಿಂಗಳು ಮತ್ತೆ ಮೂರು ಸಿನಿಮಾಗಳು ಒಂದೇ ದಿನ ಸಿಲ್ವರ್ ಸ್ಟ್ಕೀನ್‌ನಲ್ಲಿ ಮಿಂಚಲು ಸಜ್ಜಾಗಿವೆ.
ಸೆಪ್ಟೆಂಬರ್ 28ರಂದು ಬಹುನಿರೀಕ್ಷಿತ 3 ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬಾನ ದಾರಿಯಲಿ’, ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿರುವ ‘ಚಂದ್ರಮುಖಿ 2’ ಹಾಗೂ ‘ದಿ ಕಾಶ್ಮೀರಿ ಫೈಲ್ಸ್’ ಖ್ಯಾತಿಯ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಈ ಸಿನಿಮಾಗಳಿಗಾಗಿ ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ. ‘ಬಾನ ದಾರಿಯಲಿ’ ಕನ್ನಡ ಸಿನಿಮಾವಾದರೆ, ಉಳಿದೆರಡು ಸಿನಿಮಾ ಕೂಡ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಬಾನದಾರಿಯಲಿ’. ಸಿನಿಮಾದಲ್ಲಿ ಗಣೇಶ್ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ ಹಾಗೂ ಅರ್ಜುನ್ ಜನ್ಯ ಸಂಗೀತವಿದೆ.