ದೇವನಹಳ್ಳಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಅವರನ್ನು ಸೋಮವಾರ ಅಮಾನತು ಮಾಡಿ ಕಂದಾಯ ಇಲಾಖೆ ಆದೇಶಿಸಿದೆ.
ಲೋಕಾಯುಕ್ತರ ಶಿಫಾರಸ್ಸಿನಂತೆ ಶಿವರಾಜ್ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ತಹಶೀಲ್ದಾರ್ ಶಿವರಾಜ್, ಆದಾಯಕ್ಕಿಂತಲೂ ಶೇ.25ರಷ್ಟು ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಪೊಲೀಸರು ಆಗಸ್ಟ್ 17 ರಂದು ಶಿವರಾಜ್, ಅವರ ಸ್ನೇಹಿತರು, ಸಂಬಂಧಿಗಳ ಮನೆ ಸೇರಿದಂತೆ ಏಕಕಾಲಕ್ಕೆ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಆಗಸ್ಟ್ 30ರಂದು ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿಕೊಂಡಿದ್ದರು.
ತಹಶೀಲ್ದಾರ್ ಹುದ್ದೆಯಲ್ಲಿ ಶಿವರಾಜ್ ಮುಂದುವರೆದರೆ ಪ್ರಕರಣದ ತನಿಖೆಗೆ ಅಡ್ಡಿಯಾಗುವ ಮತ್ತು ಸಾಕ್ಷ್ಯಗಳ ನಾಶ ಸಾಧ್ಯತೆ ಕಾರಣ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದಕ್ಕೂ ಮೊದಲು ದೇವನಹಳ್ಳಿಯ ತಹಶೀಲ್ದಾರ್ ಹುದ್ದೆಯಿಂದ ಶಿವರಾಜ್ ಅವರನ್ನು ಸರ್ಕಾರ ಜುಲೈ 28ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಪ್ರಶ್ನಿಸಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದರು. ನಿವೃತ್ತಿಯ ಹೊಸ್ತಿನಲ್ಲಿ ಅಮಾನತುಗೊಂಡಿರುವ ಅವರು ಲೋಕಾಯುಕ್ತ ತನಿಖೆ ಎದುರಿಸಬೇಕಾಗಿದೆ