ದಾವಣಗೆರೆ: ಅಪಘಾತ ಪ್ರಕರಣವೊಂದರಲ್ಲಿ ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆ ಸೋಮವಾರ ನ್ಯಾಯಾಲಯದ ಆದೇಶದ ಮೇರೆಗೆ ಎರಡು ವಾಯುವ್ಯ ಕರ್ನಾಟಕ ಸಾರಿಗೆ ಬಸ್‍ಗಳನ್ನು ಜಪ್ತಿ ಮಾಡಲಾಯಿತು.
ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಎರಡು ಬಸ್‍ಗಳನ್ನು ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೊಡಬೇಕಿದ್ದ ಪರಿಹಾರದ ಬಾಕಿ ಮೊತ್ತ ಉಳಿಸಿಕೊಂಡಿರುವ ಕೆಎಸ್ಆರ್ಟಿಸಿ ಸಂಸ್ಥೆಯ ಚರಾಸ್ತಿ ಜಪ್ತಿಗೆ ದಾವಣಗೆರೆ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಆದೇಶಿಸಿತ್ತು.
2013ರಲ್ಲಿ ತುಮಕೂರು ಟೋಲ್ ಬಳಿ ಹಾವೇರಿ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿಗೆ ತೆರಳುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಸಂಜೀವ್ ಎಂ ಪಾಟೀಲ್ ಮೃತಪಟ್ಟಿದ್ದರು. ಇವರ ಪತ್ನಿ ಗೌರಿ ಪಾಟೀಲ್‍ಗೆ 2,82,42,885 (ಎರಡು ಕೋಟಿ 82 ಲಕ್ಷ, 42 ಸಾವಿರದ 885) ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಪರಿಹಾರ ಮೊತ್ತವನ್ನು ಪೂರ್ಣವಾಗಿ ನೀಡಲು ಸತಾಯಿಸುತ್ತಿರುವ ಕೆಎಸ್ಆರ್ಟಿಸಿ ಸಂಸ್ಥೆಯು ಈವರೆಗೆ 2.20 ಕೋಟಿ ರೂ. ಮಾತ್ರವೇ ಪಾವತಿಸಿದೆ. 2016ರ ನಂತರದ ಬಡ್ಡಿ ಮೊತ್ತ ಸೇರಿದಂತೆ ಇನ್ನೂ 1 ಕೋಟಿಯಷ್ಟು ಹಣವನ್ನು ಮೃತರ ವಾರಸುದಾರರಿಗೆ ಕೆಎಸ್ಆರ್ಟಿಸಿ ನೀಡಬೇಕಿದೆ ಎಂದು ಗೌರಿ ಎಂಬುವರ ತಂದೆ ಕಿರುವಾಡಿ ಸೋಮಶೇಖರ್ ತಿಳಿಸಿದರು.