ಮುಂಬೈ (ಮಹಾರಾಷ್ಟ್ರ): ಸೆಪ್ಟೆಂಬರ್ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಏರ್ಪಡಿಸಲಾದ ಔತಣಕೂಟದಲ್ಲಿ ಬೆಳ್ಳಿ ಮತ್ತು ಚಿನ್ನಲೇಪಿತ ಪಾತ್ರೆಗಳ ಬಳಕೆಯ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ದಕ್ಷಿಣ ಮುಂಬೈನಲ್ಲಿ ನಡೆದ ತಮ್ಮ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, “ಇಂತಹ ಕಾರ್ಯಕ್ರಮಗಳು (ಜಿ20) ಈ ಹಿಂದೆ ಭಾರತದಲ್ಲಿ ಎರಡು ಬಾರಿ ನಡೆದಿದ್ದವು. ಒಮ್ಮೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿಶ್ವ ನಾಯಕರು ಭಾಗವಹಿಸಲು ಬಂದಿದ್ದರು. ಆದರೆ ಬೆಳ್ಳಿ ಮತ್ತು ಚಿನ್ನದ ಲೇಪಿತ ಪಾತ್ರೆಗಳನ್ನು ಬಳಸಿದ ಬಗ್ಗೆ ನಾನು ಎಂದಿಗೂ ಕೇಳಿಲ್ಲ” ಎಂದು ಹೇಳಿದರು.
“ಭಾರತಕ್ಕೆ ಬರುವ ವಿಶ್ವ ನಾಯಕರಿಗೆ ಗೌರವ ತೋರಿಸುವುದು ದೇಶಕ್ಕೆ ಮುಖ್ಯ. ಅದನ್ನು ನಾನು ಒಪ್ಪುತ್ತೇನೆ. ಆದರೆ ಪ್ರಮುಖ ಸಮಸ್ಯೆಗಳನ್ನು ಬದಿಗೊತ್ತಲು ಮತ್ತು ಕೆಲವು ಜನರ ಸ್ಥಾನಮಾನವನ್ನು ಹೆಚ್ಚಿಸಲು ಇಂತಹ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಒಬ್ಬರ ಇಮೇಜ್ ಹೆಚ್ಚಿಸಲು ಇಂತಹ ಸಂದರ್ಭಗಳನ್ನು ಬಳಸುವುದು ಸರಿಯೇ? ಎಂಬ ಬಗ್ಗೆ ದೇಶದ ಜನರು ಚರ್ಚಿಸುತ್ತಾರೆ ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತಾರೆ” ಎಂದು ಪವಾರ್ ತಿಳಿಸಿದರು.