ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಅರಭಾವಿ ಪಟ್ಟಣದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಾಥ್ ನೀಡಿದ ಸಂಸದೆ ಮಂಗಲಾ ಅಂಗಡಿ
ಮೂಡಲಗಿ : ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಇಡೀ ಪ್ರಪಂಚವೇ ನಮ್ಮ ಭಾರತದತ್ತ ಕಣ್ತೆರೆದು ನೋಡುತ್ತಿದೆ. ಮೋದಿ ಅವರ ಜನಪ್ರೀಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಶನಿವಾರ ಸಂಜೆ ತಾಲೂಕಿನ ಅರಭಾವಿ ಪಟ್ಟಣದ ಆಂಜನೇಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮಾಂತರ ಜಿಲ್ಲೆಯ “ನನ್ನ ಮಣ್ಣು ನನ್ನ ದೇಶ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಎಪ್ರೀಲ್-ಮೇ ತಿಂಗಳಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಮೋದಿಯವರನ್ನು ಆಶೀರ್ವದಿಸುವಂತೆ ಕಾರ್ಯಕರ್ತರಲ್ಲಿ ಕೋರಿದರು.
ಕಳೆದ 9 ವರ್ಷಗಳಿಂದ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಮೋದಿ ಅವರಿಗಿಂತ ಮುಂಚೆ ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷ ಯಾವ ರೀತಿಯಾಗಿ ಅಧಿಕಾರ ನಡೆಸಿತು ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ನರೇಂದ್ರ ಮೋದಿ ಅವರಂತಹ ದೇಶಪ್ರೇಮಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಅವರಿಂದಲೇ ನಮ್ಮ ಹೆಮ್ಮೆಯ ಭಾರತಕ್ಕೆ ಪ್ರಪಂಚದ ಭೂ ಪಟದಲ್ಲಿ ವಿಶೇಷ ಸ್ಥಾನವಿದೆ ಎಂದು ಅವರು ಹೇಳಿದರು.
ಈಗಿನಿಂದಲೇ ನಾವೆಲ್ಲರೂ ಲೋಕಸಭಾ ಚುನಾವಣೆಯ ತಯಾರಿ ನಡೆಸಬೇಕು. ಬಿಜೆಪಿಗೆ ಅಧಿಕ ಸ್ಥಾನಗಳು ರಾಜ್ಯದಿಂದ ದೊರೆಯಬೇಕು. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಎರಡೂ ಸ್ಥಾನಗಳನ್ನು ಗೆಲ್ಲಲು ಜಿಲ್ಲೆಯ ಎಲ್ಲ ನಾಯಕರು ತಮ್ಮ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಪಕ್ಷಕ್ಕೆ ಬಲ ತುಂಬೋಣ. ಎಲ್ಲರೂ ಗಟ್ಟಿಯಾಗಿ ನಿಂತುಕೊಂಡು ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಕೆಲಸ ಕಾರ್ಯಕರ್ತರು ಮತ್ತು ಮುಖಂಡರು ಮಾಡಬೇಕೆಂದು ಅವರು ಹೇಳಿದರು.
ರಾಜ್ಯದಲ್ಲೀಗ ಕಾಂಗ್ರೇಸ್ ಸರ್ಕಾರವಿರುವುದರಿಂದ ಮಳೆಯಾಗಿದೇ ರೈತ ಕಂಗಾಲಾಗಿದ್ದಾನೆ. ಬರದ ಛಾಯೆ ಎಲ್ಲೆಡೆ ಆವರಿಸಿಕೊಂಡಿದೆ. ಕಾಂಗ್ರೇಸ್ ಇದ್ದರೆ ರಾಜ್ಯದಲ್ಲಿ ಬರ, ಅದೇ ಬಿಜೆಪಿ ಅಧಿಕಾರದಲ್ಲಿದ್ದರೆ ರಾಜ್ಯಾಧ್ಯಂತ ಮಳೆಯಾಗಿ ರೈತನ ಮೊಗದಲ್ಲಿ ಸಂತಸವು ತುಂಬಿಕೊಂಡಿರುತ್ತದೆ. ಜೊತೆಗೆ ರೈತನು ಸಹ ಸುಖ ಹಾಗೂ ಸಮೃದ್ಧಿಯ ಜೀವನ ಸಾಗಿಸುತ್ತಾನೆ ಎಂದು ಅವರು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಪ್ರಚಾರ ಮಾಡದೇ ನಮ್ಮ ಮತದಾರರು 71540 ಮತಗಳ ಮುನ್ನಡೆ ದೊರಕಿಸಿಕೊಟ್ಟು ರಾಜ್ಯದಲ್ಲಿಯೇ ನಂ.4 ಹಾಗೂ ಬಿಜೆಪಿ ಅಭ್ಯರ್ಥಿಗಳಲ್ಲಿಯೇ ನಂಬರ 1 ಸ್ಥಾನ ಗಳಿಸಿಕೊಡುವಲ್ಲಿ ಆಶೀರ್ವಾದ ಮಾಡಿದ್ದಾರೆ. 115402 ಮತಗಳನ್ನು ನನಗೆ ನೀಡುವ ಮೂಲಕ ನನ್ನ ಮೇಲೆ ಪ್ರೀತಿ ಆದರ ತೋರಿಸಿದ್ದಾರೆ. ಸಮಸ್ತ ಮತದಾರರ ಪ್ರಭುಗಳಿಗೆ ನನ್ನ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ದೇಶದ ಪ್ರತಿ ಹಳ್ಳಿ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ವೀರ ಯೋಧರ ಉದ್ಯಾನವನಕ್ಕೆ ಬಳಸಲಾಗುತ್ತಿದೆ. ಇದು ಪ್ರಧಾನಿಗಳ ಮಹತ್ವಾಕಾಂಕ್ಷೆಯ ಅಭಿಯಾನವಾಗಿದ್ದು, ಈ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸತ್ ಸದಸ್ಯೆ ಮಂಗಲಾ ಅಂಗಡಿ ಮಾತನಾಡಿ, ನಮ್ಮ ದೇಶದ ಭವ್ಯ ಪರಂಪರೆ, ಇತಿಹಾಸ ಹಾಗೂ ಅಖಂಡ ಭಾರತ ನಿರ್ಮಾಣಕ್ಕೆ ಪ್ರಧಾನಿಗಳು ಹಗಲಿರುಳು ದುಡಿಯುತ್ತಿದ್ದಾರೆ. ದೇಶವು ಮತ್ತೊಮ್ಮೆ ಪ್ರಗತಿಯತ್ತ ದಾಪುಗಾಲು ಹಾಕಲು ಪ್ರಧಾನಿಯವರಿಗೆ ಬೆಂಬಲ ನೀಡುವಂತೆ ಅವರು ತಿಳಿಸಿದರು.
ಮಾಜಿ ಶಾಸಕ ಅರುಣ ಶಹಾಪೂರ ಮಾತನಾಡಿ, ಪ್ರಧಾನಿಯವರ ಮಹತ್ವಾಕಾಂಕ್ಷೆಯ ನನ್ನ ಮಣ್ಣು ನನ್ನ ದೇಶ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಮರ ಯೋಧರ ತ್ಯಾಗವನ್ನು ಸ್ಮರಿಸಿಕೊಂಡಿದ್ದಾರೆ. ದೇಶದ ಪ್ರತಿ ಮನೆ ಮನೆಯ ಮಣ್ಣನ್ನು ಸಂಗ್ರಹ ಮಾಡಲಾಗುತ್ತಿದೆ. ಭಾರತವನ್ನು ತುಕಡೆ-ತುಕಡೆ ಕರ್ ದೇಂಗೆ ಎನ್ನುವವರಿಗೆ ಈ ಅಭಿಯಾನ ಅಂತವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.
ಜಿಲ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಇಂದು ರಾಷ್ಟ್ರ ರಾಜಧಾನಿಯಲ್ಲಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆ ನಡೆದಿರುವುದು ಅವರ ನಾಯಕತ್ವಕ್ಕೆ ಹಿಡಿದ ಸಾಕ್ಷಿಯಾಗಿದೆ. ಇಂಡಿಯಾ ಎನ್ನುವ ಒಕ್ಕೂಟ ಮಾಡಿಕೊಂಡಿರುವ ನಮ್ಮ ವಿರೋಧಿ ಪಕ್ಷಗಳು ಭಾರತ ರತ್ನ ಪ್ರಶಸ್ತಿಯನ್ನು ಏಕೆ ನಿರಾಕರಿಸುತ್ತಿಲ್ಲ ಎಂದು ಟೀಕೆ ಮಾಡಿದರು. ಬಾಲಚಂದ್ರ ಜಾರಕಿಹೊಳಿ ಕೇವಲ ಅರಭಾವಿ ಹುಲಿ ಅಲ್ಲ. ಅವರು ಬೆಳಗಾವಿ ಜಿಲ್ಲೆಯ ಹುಲಿ ಎಂದ ಅವರು, ಬಾಲಚಂದ್ರ ಜಾರಕಿಹೊಳಿ ಅವರ ಬಲದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಬೆಳಗಾವಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಾಂತೇಶ ಕುಡಚಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮನೆ ಮನೆಗಳಿಂದ ಮಣ್ಣನ್ನು ಸಂಗ್ರಹಿಸಿ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅರಭಾವಿ ಪಟ್ಟಣದ ಮುಖಂಡರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.