ಕಲಬುರಗಿ: ಹೆಣ್ಣು ಮಕ್ಕಳ ಆತ್ಮರಕ್ಷಣೆ ಹಿತದೃಷ್ಟಿಯಿಂದ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್ (ಸ್ವ-ಆತ್ಮರಕ್ಷಣೆ) ಮಾಡಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ತರಬೇತಿಗಳನ್ನು ಆರಂಭಿಸಲಾಗಿದೆ.
ವಿದ್ಯಾರ್ಥಿನಿಯರ ವಸತಿ ನಿಲಯಗಳು ಶಾಲಾ ಕಾಲೇಜುಗಳಿಂದ ದೂರ ಇವೆ. ಕಾಲೇಜು ಮುಗಿಸಿ ವಾಪಾಸ್ ಆಗುವ ವೇಳೆ ಅವರಿಗೆ ರೈಲ್ವೆ ಮತ್ತು ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಮಾನಸಿಕ ಹಾಗೂ ದೈಹಿಕ, ದೌರ್ಜನ್ಯ ನಡೆಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಕರಾಟೆ ತರಬೇತಿ ನೀಡಲಾಗುತ್ತಿದೆ.
ಕಲಬುರಗಿಯಲ್ಲಿ 300 ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಕಲಬುರಗಿ ಜಿಲ್ಲೆಯ 18 ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ನಗರ ಪ್ರದೇಶದ ಪೋಸ್ಟ್ ಮ್ಯಾಟ್ರಿಕ್ ಕೆ.ಎನ್.ಜೆಡ್ 1 ಮತ್ತು ಕೆ.ಎನ್.ಜೆಡ್ 2, ತಾವರಗೇರಾ, ವಿಶ್ವವಿದ್ಯಾಲಯ ಆವರಣದ ವಸತಿ ಶಾಲೆ, ಪಟೇಲ್ ನಗರ, ಮದಿನಾ ಕಾಲೊನಿ ಹಾಗೂ ವಿದ್ಯಾನಗರ ಸೇರಿ 7 ವಸತಿ ಶಾಲೆಗಳ 300 ವಿದ್ಯಾರ್ಥಿನಿಯರಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ ಕರಂಗಿ ತಿಳಿಸಿದ್ದಾರೆ.