ವಿಜಯನಗರ: ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಅವರು ಹೊಸಪೇಟೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ರಾಘವೇಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ರಾಘವೇಂದ್ರ ಅವರು 2005ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕವಾಗಿದ್ದರು. ಕಳೆದ 18 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆ ಆಗಿದ್ದರು. ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದು ಸೇವೆ ಸಲ್ಲಿಸುತ್ತಿದ್ದರು.
ವಿಜಯನಗರದ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಹಂಪಿ ಸಿಪಿಐ ಕೆ. ಶಿವರಾಜ್ ಅವರು ರಾಘವೇಂದ್ರ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.