ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಕೈ ಕಾರ್ಯಕರ್ತರು ನಿಗಮ ಮಂಡಳಿಗೆ ಶಾಸಕರನ್ನು ನೇಮಕ ಮಾಡದಂತೆ ಒಕ್ಕೋರಲಿನ ಆಗ್ರಹ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್, ನಿಗಮ ಮಂಡಳಿಗಳ ಅಧ್ಯಕ್ಷ, ಸದಸ್ಯ ಸ್ಥಾನವನ್ನು ಈ ತಿಂಗಳಾತ್ಯಕ್ಕೆ ನೇಮಿಸುವಂತೆ ಸಲಹೆ ನೀಡಿದರು.
ಎಲ್ಲರಿಗೂ ಅವಾಕಶ ಸಿಗುವ ನಿಟ್ಟಿನಲ್ಲಿ ಎರಡೂವರೆ ವರ್ಷದಂತೆ ನಿಗಮ ಮಂಡಳಿ, ಸಮಿತಿಗಳಿಗೆ ನೇಮಕ ಮಾಡಿ. ಶಾಸಕರಿಗಿಂತ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಅವಕಾಶ ನೀಡಬೇಕು. ಅಲ್ಪ ಸಂಖ್ಯಾತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಒಂದು ಬಾರಿ ಸಚಿವ ಸ್ಥಾನ ಪಡೆದವರು ಅದಕ್ಕಿಂತ ಕೆಳಗಿನ ಹುದ್ದೆ ಪಡೆಯಬಾರದು. ಮಾಜಿ ಸಚಿವರು ನಿಗಮ ಮಂಡಳಿಗಳ ಸ್ಥಾನ ತೆಗೆದುಕೊಳ್ಳಬಾರದು. ಸಚಿವರನ್ನು ಶಾಸಕರು ದೂರಿದಂತೆ, ಶಾಸಕರನ್ನು ಕಾರ್ಯಕರ್ತರು ದೂರುತ್ತಿದ್ದಾರೆ. ಅದಕ್ಕಾಗಿ ರಾಜ್ಯ ಮಟ್ಟದಲ್ಲಿ ಸಣ್ಣ ಸಮಿತಿ ಮಾಡಿದರೆ ಒಳಿತು ಎಂದು ಸಲಹೆಯನ್ನು ನೀಡಿದರು.
ಇಂಡಿಯಾ ಘಟಬಂದನದ ತೀರ್ಮಾನ ಏನೇ ಇರಲಿ, ಕರ್ನಾಟಕದಲ್ಲಿ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಸ್ಪರ್ಧಿಸಬೇಕು. ಶಾಸಕರಿಗೆ ಪದಾಧಿಕಾರಿಗಳ ಹುದ್ದೆ ಬೇಡ. ಅವರನ್ನು ಮಾರ್ಗದರ್ಶಕರನ್ನಾಗಿ ಮಾಡಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಪಾದಯಾತ್ರೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಮಾಡಬೇಕು. ಫಲಾನುಭವಿಗಳಿಗೆ ಸಿಎಂ ಪತ್ರ ಬರೆಯಬೇಕು. ಪಂಚ ಗ್ಯಾರಂಟಿ ಬಗ್ಗೆ ಗ್ರಾಮ ಪಂಚಾಯತಿ, ತಾಲೂಕು ಮಟ್ಟದಲ್ಲಿ ಪ್ರಚಾರ ನಡೆಸಬೇಕು. ಹೋರ್ಡಿಂಗ್ಗಳನ್ನು ಹಾಕಿ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.