ಚಿಕ್ಕಮಗಳೂರು: ಹೊಗಳಿಕೊಂಡು, ಬಕೆಟ್ ಹಿಡಿಯುವ ರಾಜಕಾರಣಿಯಾಗಿದ್ದರೆ ನಾನು ಮಂತ್ರಿಯಾಗಲು 2012ರವರೆಗೆ ಕಾಯಬೇಕಿರಲಿಲ್ಲ. ಬಹಳ ಮುಂಚೆಯೇ ಮಂತ್ರಿ ಆಗುತ್ತಿದ್ದೆ. ನನಗೆ ಅಧಿಕಾರ ಮತ್ತು ಜವಾಬ್ದಾರಿ ಎಂದು ಬಂದಾಗ ಜವಾಬ್ದಾರಿ ತೆಗೆದುಕೊಳ್ಳಲು ಉತ್ಸುಕನಾಗಿರುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದ್ದಲ್ಲ. ಮಂತ್ರಿಸ್ಥಾನ ನನಗೆ ಸಿಕ್ಕಿರುವ ಅಧಿಕಾರ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರೋ ಜವಾಬ್ದಾರಿ. ಇವೆರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಅಧಿಕಾರದ ವ್ಯಾಮೋಹದಿಂದ ಜವಾಬ್ದಾರಿಯ ಕೆಲಸಕ್ಕೆ ಹಿನ್ನೆಡೆಯಾಗಬಾರದು. ಅದಕ್ಕಾಗಿಯೇ ಕಳೆದ ತಿಂಗಳು 30ರಂದೇ ರಾಜೀನಾಮೆ ನೀಡಿದ್ದೇನೆ. ನಿನ್ನೆ ಕೂಡ ನನ್ನ ರಾಜೀನಾಮೆಯನ್ನ ಅಂಗೀಕರಿಸುವಂತೆ ಸಿಎಂಗೆ ಕೇಳಿಕೊಂಡಿದ್ದೇನೆ ಎಂದರು. ಇದೇ ವೇಳೆ ಬಿಹಾರ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಹಾರದಲ್ಲಿ ನಿತೀಶ್ ಕುಮಾರ್ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ ಎನ್ನುತ್ತಿದ್ದಾರೆ ಎಂದರು.