ಶಿರಸಿ(ಉತ್ತರ ಕನ್ನಡ): ಮಳೆಯ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದಲ್ಲಿ ಭತ್ತ, ಮೆಕ್ಕೆ ಜೋಳ ಬೆಳೆಗಳು ಒಣಗಿ ಹಾಳಾಗಿದ್ದು, ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಹೊಲಗಳು ಬರಿದಾಗಿದೆ.
ಇದು ರೈತರನ್ನು ಮಮ್ಮಲ ಮರುವಂತೆ ಮಾಡಿದ್ದು, ಬರಗಾಲ ಘೋಷಣೆ ಮಾಡುವಂತೆ ಆಗ್ರಹ ಹೆಚ್ಚಾಗಿದೆ.
ಬನವಾಸಿ, ಬದನಗೋಡ, ಸಂತೊಳ್ಳಿ ವ್ಯಾಪ್ತಿಯು ಮಳೆಯಾಶ್ರಿತ ಭತ್ತದ ಬೆಳೆಯ ಪ್ರದೇಶವಾಗಿದ್ದು, ಪ್ರಸಕ್ತ ಸಾಲಿನಲ್ಲಿ 2,480 ಹೆಕ್ಟೇರ್ ಭತ್ತ, 1,550 ಹೆಕ್ಟೇರ್ ಅಡಿಕೆ, ನೂರಾರು ಎಕರೆ ಮೆಕ್ಕೆ ಜೋಳ, ಬಾಳೆ ಬೆಳೆಗಳು ನೀರಿಲ್ಲಿದೇ ಒಣಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಬದನಗೋಡ ವ್ಯಾಪ್ತಿಯಲ್ಲಿನ ಬೆಳೆಗಳು ಗೋವಿನ ಆಹಾರಕ್ಕೂ ಬಾರದಂತೆ ಒಣಗಿ ಹಾಳಾಗಿದೆ.
ಅಕಾಲಿಕ ಮಳೆ, ಕೊರತೆಯಿಂದ ಅಡಕೆ ಮಿಳ್ಳೆಗಳು ಈ ಹಿಂದೆ ಉದುರಿ ಹಾಳಾಗಿದ್ದವು. ಈಗ ಹಲವೆಡೆ ಅಡಕೆ ಚಂಡೆಗಳು ಹಳದಿಯತ್ತ ತಿರುಗಿದ್ದು, ಇನ್ನೂ ನೀರಿನ ಕೊರತೆಯಾದಲ್ಲಿ ಸಾಯುವ ಆತಂಕ ಎದುರಾಗಿದೆ. ಇದರ ಜೊತೆಗೆ ಎಕರೆಗೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಬೆಳೆಯಾದ ಭತ್ತ, ಜೋಳ ನಾಶವಾದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.