ಚಿಕ್ಕೋಡಿ : ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆ ವಿಷಯದಲ್ಲಿ ಒಂದಾದಂತೆ ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶಿಸುವ ಮೂಲಕ ಚಿಕ್ಕೋಡಿ ಜಿಲ್ಲೆ ಮಾಡಿಸಲು ಮುಂದಾಗಬೇಕು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆಗಾಗಿ ಬಹಳ ದಿನಗಳಿಂದ ಹೋರಾಟ ನಡೆಯುತ್ತಿದೆ. ಆದ್ದರಿಂದ ಈ ಭಾಗದ ಜನರ ಹಿತದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಮಾಡಬೇಕು. ಚಿಕ್ಕೋಡಿಗೆ ಸರಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ತರಬೇಕು. ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸರಕಾರ ಉರುಳಿಸುವ ಮತ್ತು ಸರ್ಕಾರ ರಚಿಸುವಂತಹ ಅದ್ಬುತ್ ಶಕ್ತಿ ಹೊಂದಿರುವ ರಾಜಕಾರಣಿಗಳು ಇದ್ದಾರೆ. ಆದರೆ ಇವರ್ಯಾರೂ ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ. ಇವರಿಗೆ ಜನರ ಬಗ್ಗೆ ಕಳಕಳಿ ಇಲ್ಲದಂತಾಗಿದೆ. ನಿಜವಾಗಲೂ ಜನರ ಬಗ್ಗೆ ಕಾಳಜಿ ಇದ್ದರೆ ಶೀಘ್ರ ಚಿಕ್ಕೋಡಿ ಜಿಲ್ಲೆ ಮಾಡಿಸಬೇಕು. ಒಂದು ವೇಳೆ ಇದಕ್ಕೆ ಹಿಂದೇಟು ಹಾಕಿದರೇ ಮುಂದಿನ ಚುನಾವಣೆಯಲ್ಲಿ ಈ ಭಾಗದ ಜನರು ಎಲ್ಲ ನಾಯಕರಿಗೂ ಬುದ್ದಿ ಕಲಿಸಲು ಮುಂದಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೇಂದ್ರ ಸಚಿವ ಸುರೇಶ ಅಂಗಡಿಯವರು ಮಾಡಿ ಹೋಗಿರುವ ಬೆಳಗಾವಿ-ಧಾರವಾಡ ರೇಲ್ವೆ ಮಾರ್ಗವನ್ನು ಕೊಲ್ಲಾಪೂರವರೆಗೆ ವಿಸ್ತರಿಸಲು ರಾಜಕೀಯ ನಾಯಕರು ಪ್ರಯತ್ನಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿರುವ ಕರಗಾಂವ ಏತನೀರಾವರಿ ಸೇರಿದಂತೆ 11 ಏತ ನೀರಾವರಿ ಯೋಜನೆಗಳನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ಮೂಲಕ ಈ ಭಾಗದಲ್ಲಿ ಸಮಗ್ರ ನೀರಾವರಿ ಮಾಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ವಕ್ತಾರ ತ್ಯಾಗರಾಜ ಕದಮ, ಎಸ್.ವೈ.ಹಂಜಿ, ರೇವಪ್ಪ ತಳವಾರ ಉಪಸ್ಥಿತರಿದ್ದರು.