ಬೆಂಗಳೂರು: ಬುಧವಾರ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಲೋಕಾರ್ಪಣೆಯಾಗಲಿದೆ. ಮೈಸೂರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಕೊನೆಗೂ ಹಲವು ದಿನಾಂಕಗಳ ಬಳಿಕ ಬೆಳಗ್ಗೆ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಜಾರಿಯಾಗಲಿದೆ. ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ‘ಗೃಹಲಕ್ಷ್ಮಿ’ ಪ್ರಮುಖವಾಗಿದ್ದು, ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಹಲವು ಗೊಂದಲದ ಬಳಿಕ ಅಂತಿಮವಾಗಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗುತ್ತಿದೆ. ಹಲವು ಬಾರಿ ಚಾಲನೆ ದಿನಾಂಕ ನಿಗದಿಯಾಗಿ ಬಳಿಕ ಮುಂದೂಡಿಕೆಯಾದ ನಂತರ ಕೊನೆಯದಾಗಿ ಆ.30ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದಕ್ಕೂ ಮುನ್ನ ಮೂರು ಬಾರಿ ದಿನಾಂಕ ಮುಂದೂಡಲಾಗಿತ್ತು. ಮೊದಲು ಆಗಸ್ಟ್ ಮೊದಲ ವಾರ, ಬಳಿಕ ಆ. 17 ಅಥವಾ ಆ.18ರಂದು ಯೋಜನೆ ಚಾಲನೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಮತ್ತೆ ದಿನಾಂಕ ಬದಲು ಮಾಡಿ ಆ. 21ಕ್ಕೆ ನಿಗದಿಯಾಗಿತ್ತು. ಬಳಿಕ ಮತ್ತೆ ಬದಲಾವಣೆ ಮಾಡಿ ಆ.27 ಎಂದು ಮರು ನಿಗದಿ ಮಾಡಲಾಗಿತ್ತು. ಕೊನೆಯದಾಗಿ ಆ.30ಕ್ಕೆ ದಿನಾಂಕ ಮರು ನಿಗದಿ ಮಾಡಲಾಯಿತು.
ಬೆಳಗಾವಿಯಿಂದ ಮೈಸೂರಿಗೆ ಚಾಲನೆ ಸ್ಥಳ ಶಿಫ್ಟ್: ಬೆಳಗಾವಿಯಲ್ಲಿ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಬಳಿಕ ಯೋಜನೆಯ ಚಾಲನೆ ಕಾರ್ಯಕ್ರಮ ಸಿಎಂ ತವರೂರು ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಯಿತು. ಈ ಮೊದಲು ಬೆಳಗಾವಿಯಲ್ಲಿ ಯೋಜನೆಗೆ ಅದ್ದೂರಿ ಚಾಲನೆ ನೀಡಲು ಸ್ಥಳ ನಿಗದಿ ಮಾಡಲಾಗಿತ್ತು. ಇದರ ಜೊತೆಗೆ ರಾಜ್ಯಾದ್ಯಂತ ವಿಭಾಗವಾರು ಕಾರ್ಯಕ್ರಮಕ್ಕೆ ಏಕ ಕಾಲದಲ್ಲಿ ಚಾಲನೆ ಮಾಡಲು ನಿರ್ಧರಿಸಲಾಗಿತ್ತು. ಸ್ವಂತ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಪ್ಲಾನ್ ಮಾಡಲಾಗಿತ್ತು. ಆದರೆ ಬಳಿಕ ಬೆಳಗಾವಿ ಬದಲಿಗೆ ಮೈಸೂರಿಗೆ ಕಾರ್ಯಕ್ರಮ ಶಿಫ್ಟ್ ಆಯಿತು.
ಏಕ ಕಾಲದಲ್ಲಿ ಅತಿ ದೊಡ್ಡ ಸಾಮಾಜಿಕ ಭದ್ರತಾ ಯೋಜನೆಗೆ ಚಾಲನೆ: ದೇಶದಲ್ಲಿಯೇ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ ಯೋಜನೆ ಬುಧವಾರ ಅಧಿಕೃತ ಚಾಲನೆ ಸಿಗಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆ. ಈ ಯೋಜನೆಯೊಂದಕ್ಕೆ ವಾರ್ಷಿಕ 32ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಿದ್ದು, ಇದು ದೇಶದಲ್ಲಿ ಈವರೆಗೆ ಜಾರಿಗೊಳಿಸಿರುವ ಬಹುದೊಡ್ಡ ಸಾಮಾಜಿಕ ಭದ್ರತಾ ಯೋಜನೆಯೆಂದು ಹೇಳಲಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಎರಡು ಸಾವಿರ ರೂ.ಗಳ ಚೆಕ್ ಹಸ್ತಾಂತರಿಸಲಾಗುತ್ತದೆ. ಮೈಸೂರಿನಲ್ಲಿ ಯೊಜನೆಯ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಇದರೊಂದಿಗೆ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಪಂಚಾಯತಿಗಳಲ್ಲಿಯೂ ಕಾರ್ಯಕ್ರಮ ಉದ್ಘಾಟನೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ಸುಮಾರು 10 ಸಾವಿರ ಸ್ಥಳದಲ್ಲಿ ಯೋಜನೆ ಏಕಕಾಲಕ್ಕೆ ಉದ್ಘಾಟನೆಗೊಳ್ಳಲಿದೆ. ಅದರ ಜತೆಗೆ ಸುಮಾರು 12,600 ಕಡೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿದೆ.
ಬೃಹತ್ ಕಾರ್ಯಕ್ರಮದ ಸಿದ್ಧತೆಗಾಗಿ ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಸುತ್ತಮುತ್ತ ಜಿಲ್ಲೆಗಳಿಂದಲೂ ಜನರು ವಿಶೇಷವಾಗಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ