ಬೆಂಗಳೂರು : ರೋಚಕ ಫೈನಲ್ ಕಾದಾಟದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೈಸೂರು ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ನಲ್ಲಿ ಮೇಲುಗೈ ಸಾಧಿಸಿದ ಮೊಹಮ್ಮದ್ ತಾಹಾ, ಮನೀಶ್ ಪಾಂಡೆ ಹಾಗೂ ಮನ್ವಂತ್ ಕುಮಾರ್ ಉತ್ತಮ ಬೌಲಿಂಗ್ ನೆರವಿನಿಂದ ಹುಬ್ಬಳ್ಳಿ ಗೆದ್ದು ಬೀಗಿತು.
ಮಹಾರಾಜ ಟ್ರೋಫಿ ಫೈನಲ್ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಹುಬ್ಬಳ್ಳಿ ಟೈಗರ್ಸ್ ಮೊದಲು ಬ್ಯಾಟ್ ಮಾಡಿತು. ಎರಡನೇ ಎಸೆತದಲ್ಲೇ ಲವನಿತ್ ಸಿಸೋಡಿಯಾ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಆರಂಭಿಕರಾದ ಮೊಹಮ್ಮದ್ ತಾಹಾ ಹಾಗೂ ಕೆ.ಎಲ್ ಶ್ರೀಜಿತ್ ಜೋಡಿ 6 ಓವರ್‌ಗಳಲ್ಲಿ 7 ಬೌಂಡರಿಗಳೊಂದಿಗೆ 59 ರನ್ ಗಳಿಸಿ ಪವರ್‌ಪ್ಲೇನ ಸಂಪೂರ್ಣ ಲಾಭ ಪಡೆಯಿತು. ಈ ಹಂತದಲ್ಲಿ 31 ಎಸೆತಗಳಲ್ಲಿ 38 ರನ್ ಗಳಿಸಿದ್ದ ಕೆಎಲ್ ಶ್ರೀಜಿತ್ರನ್ನ 12ನೇ ಓವರ್‌ನಲ್ಲಿ ಜೆ.ಸುಚಿತ್ ಪೆವಿಲಿಯನ್ಗೆ ಕಳುಹಿಸಿದರು.
ಮತ್ತೊಂದೆಡೆ 27 ಎಸೆತಗಳಲ್ಲಿ ಅರ್ಧ ಶತಕವನ್ನು ಗಳಿಸಿದ ತಾಹಾ 70 ರನ್ ಗಳಿಸಿದ್ದಾಗ ಕುಶಾಲ್ ವಾಧ್ವಾನಿಗೆ ವಿಕೆಟ್ ನೀಡಿದರು. ನಂತರ ಅಖಾಡಕ್ಕಿಳಿದ ನಾಯಕ ಮನೀಶ್ ಪಾಂಡೆ 23 ಎಸೆತಗಳಲ್ಲಿ 50* ರನ್ ಗಳಿಸುವ ಮೂಲಕ ಹುಬ್ಬಳ್ಳಿಯ ರನ್ ದ್ವಿಶತಕ ತಲುಪುವಂತೆ ಮಾಡಿದರು. ಸಂಜಯ್ ಅಶ್ವಿನ್ (16) ಗಾಯಗೊಂಡು ಹೊರ ನಡೆದರೆ, ಪ್ರವೀಣ್ ದುಬೆ 4 ಮನ್ವಂತ್ ಕುಮಾರ್ 14 ರನ್ ಗಳಿಸಿ ಔಟಾದರು. ಮನೀಶ್ ಪಾಂಡೆ ಅಜೇಯರಾಗಿ ಉಳಿಯುವ ಮೂಲಕ ಹಬ್ಬಳ್ಳಿ ತಂಡವು 8 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು.
ಚಾಂಪಿಯನ್ ಪಟ್ಟಕ್ಕಾಗಿ 204 ರನ್‌ಗಳ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಮೊದಲ 5 ಓವರ್‌ಗಳಲ್ಲಿ 56 ರನ್ ಗಳಿಸುವ ಮೂಲಕ ಹುಬ್ಬಳ್ಳಿಗೆ ತಕ್ಕ ತಿರುಗೇಟು ನೀಡಿತು. ಬಳಿಕ ಎಸ್‌ಯು ಕಾರ್ತಿಕ್ (28) ರನ್ ಗಳಿಸಿದ್ದಾಗ ಮಿತ್ರಕಾಂತ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕ ಕರುಣ್ ನಾಯರ್, ರವಿಕುಮಾರ್ ಸಮರ್ಥ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ ಸಮರ್ಥ್ ಅರ್ಧಶತಕ ಪೂರೈಸಿದರು. ಆದರೆ, 12ನೇ ಓವರ್‌ನಲ್ಲಿ ಮನ್ವಂತ್ ಕುಮಾರ್ ಬೌಲಿಂಗ್‌ನಲ್ಲಿ ಅದ್ಭುತ ರನ್ ಔಟಿಗೆ ಸಮರ್ಥ್ (63) ಬಲಿಯಾದರು. ಕರುಣ್ ನಾಯರ್ (37) ಕೆ.ಸಿ ಕಾರಿಯಪ್ಪ ಅವರ ಓವರ್‌ನಲ್ಲಿ ಔಟಾದರು